ಬೆಂಗಳೂರು: ವಿಧಾನ ಸಭೆ ಚುನಾವಣೆ ಸಮೀಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚುನಾವಣೆ ಸಿದ್ಧತೆ ಜೋರಾಗಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಜನರನ್ನು ತಲುಪುತ್ತಿದ್ದು ಬಿಜೆಪಿ ಜನ ಸಂಕಲ್ಪದಿಂದ ಮತದಾರರ ಮನ ಗೆಲ್ಲಲು ಯತ್ನಿಸುತ್ತಿದ್ದರೆ ಇತ್ತ ಜೆಡಿಎಸ್ ಕೂಡ ನವೆಂಬರ್ 1ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭಿಸಲು ತಯಾರಿ ನಡೆಸಿದೆ.
ನವೆಂಬರ್ 1ರಿಂದ ಜೆಡಿಎಸ್ ಪಂಚರತ್ನ ಜನಸಂಪರ್ಕ ರಥಯಾತ್ರೆ ಆರಂಭವಾಗುತ್ತಿದ್ದು ಮೊದಲ ಹಂತದ ಪಂಚರತ್ನ ರಥಯಾತ್ರೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದೆ. ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ ಸೇರಿದಂತೆ ಪಂಚಯಾತ್ರೆಯಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ ಸಾಗಲಿದೆ ರಥಯಾತ್ರೆ: ನ.1ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗುತ್ತೆ. ನವೆಂಬರ್ 6 ರಿಂದ 10ರವರೆಗೆ ಚಿಕ್ಕಬಳ್ಳಾಪುರದಲ್ಲಿ ರಥಯಾತ್ರೆ ನಡೆಯುತ್ತೆ. ನ.11ರಿಂದ 13ರವರೆಗೆ ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಸಂಚಾರ ನ.14ರಿಂದ 23ರವರೆಗೆ ತುಮಕೂರು ಜಿಲ್ಲೆಯಲ್ಲಿ ರಥಯಾತ್ರೆ ಸಾಗಲಿದೆ.
ನ.24 ರಿಂದ 30ರವರೆಗೆ ಹಾಸನ ಜಿಲ್ಲೆ, ಡಿ.1ರಂದು ಕುಣಿಗಲ್ ಕ್ಷೇತ್ರದಲ್ಲಿ ಸಂಚರಿಸಲಿರುವ ರಥಯಾತ್ರೆ ಡಿ.2ರಿಂದ 5ರವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚರಿಸಲಿದೆ. ಇನ್ನು ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ನಡೆಯಲಿದೆ.
ಈ ರಥಯಾತ್ರೆ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಜೆಡಿಎಸ್ ಪ್ಲ್ಯಾನ್ ಮಾಡಿಕೊಂಡಿದೆ. ಪಂಚರತ್ನ ರಥಯಾತ್ರೆ ಮೂಲಕ ಅಧಿಕಾರಕ್ಕೆ ಏರಲು ಪ್ಲ್ಯಾನ್ ಮಾಡಿದ್ದು, ಈ ವೇಳೆಯೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಗೊಂದಲವಿರುವ ಕ್ಷೇತ್ರಗಳ ಮುಖಂಡರನ್ನು ಕರೆದು ಸಭೆ ಮಾಡಿದ್ದಾರೆ. ಎಚ್.ಡಿ.ಕೋಟೆ, ಮಧುಗಿರಿ, ಶಿರಾ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಮಾಡಿದ್ದಾರೆ.
ಆಕಾಂಕ್ಷಿಗಳ ಪರ ಲಾಬಿಗೆ ನೂರಾರು ಬೆಂಬಲಿಗರು ಬಂದಿದ್ದಾರೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.