ಕಲಬುರಗಿ: ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟದಿಂದ ಬೃಹತ್ ಸೈಕಲ್ ಅ.10ರಂದು ಬಳ್ಳಾರಿಯಲ್ಲಿ ಚಾಲನೆಗೊಂಡಿದ್ದು, ಇಂದಿಗೆ 17ನೇ ದಿನಗಳನ್ನು ಪೂರ್ಣಗೊಳಿಸಿದೆ.
ಜಾಥಾ ಆರಂಭವಾದ 12ನೇ ದಿನಕ್ಕೆ ಬೀದರ್ ತಲುಪಿದ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ನೌಕರರು, ಸರ್ಕಾರಕ್ಕೆ ಮತ್ತು ನಿಗಮಗಳ ಆಡಳಿತ ಮಂಡಳಿಗೆ ಎಚ್ಚರಿಕೆ ಸಂದೇಶ ರವಾನಿಸಲು ಪ್ರತಿಭಟನಾ ರ‍್ಯಾಲಿ ಕೂಡ ಮಾಡಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನೌಕರರು ಕಳೆದ 17 ದಿನಗಳಿಂದ ಸೈಕಲ್ ಜಾಥಾ ಪ್ರಾರಂಭಿಸಿದ್ದು ಈ ಮೂಲಕ ರಾಜ್ಯಾದ್ಯಂತ ಸೈಕಲ್ ಮೇಲೇರಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತ ಸರಕಾರದ ಗಮನ ಸೆಳೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆ ಬೀದರ್‌ನಿಂದ ಕಲಬುರಗಿ ನಗರಕ್ಕೆ ಜಾಥಾ ಆಗಮಿಸಿದ್ದು ಅದನ್ನು ನೌಕರರ ಕೂಟ ಸ್ವಾಗತಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟದಿಂದ ಸಾರಿಗೆ ನೌಕರರ ಅಗತ್ಯ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ನಾಳೆ (ಅ.27) ನಗರದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪತಿಭಟನಾ ರ‍್ಯಾಲಿ ಹಾಗೂ ಸೈಕಲ್ ಜಾಥಾ ಜರುಗಲಿದ್ದು, ಸಾವಿರಾರು ನೌಕರರು ಭಾಗವಹಿಸುತ್ತಿದ್ದಾರೆ.
ಈ ವೇಳೆ ಸಮಾವೇಶಕ್ಕೆ ಸ್ವಾಮೀಜಿಗಳು, ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಬಹುತೇಕ ಎಲ್ಲರೂ ಭಾಗವಹಿಸುವ ನಿರೀಕ್ಷೆಯಲ್ಲಿ ನೌಕರರ ಕೂಟ ಇದೆ ಎಂದು ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಇನ್ನು ಕಳೆದ 7 ವರ್ಷಗಳಿಂದ ಸಾರಿಗೆ ನೌಕರರ ವೇತನ ಹೆಚ್ಚಳವಾಗಿಲ್ಲ. ಅಲ್ಲದೇ ಮಾಡಿದ ಹೆಚ್ಚುವರಿ ಕೆಲಸಕ್ಕೂ ಸರಿಯಾದ ಭತ್ಯೆ, ಸವಲತ್ತು ಇಲ್ಲ. ಇವುಗಳ ಈಡೆರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ 2021ರಲ್ಲಿ ಮುಷ್ಕರ ಮಾಡಲಾಯಿತು. ಆ ವೇಳೆ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಸರಕಾರ ಗುಬ್ಬಿ ಮೇಲೆ ಬೃಹ್ಮಾಸ್ತ್ರ ಎಂಬಂತೆ ಅಮಾಯಕ ಕಾರ್ಮಿಕರನ್ನು ವಜಾ, ವರ್ಗಾವಣೆ, ಅಮಾನತು, ಪೊಲೀಸ್ ಕೇಸು ದಾಖಲಿಸಿ ಅಮಾನವಿಯವಾಗಿ ನಡೆದುಕೊಂಡಿತ್ತು.
ಸದ್ಯ ಈಗ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಕೂಡಲೆ ಸರಕಾರಿ ನೌಕರರ ಮಾದರಿಯಲ್ಲಿ ವೇತನ ಹೆಚ್ಚಿಸಬೇಕು. ಭ್ರಷ್ಟಾಚಾರ ಹಾಗೂ ಕಿರುಕುಳ ಮುಕ್ತ ನಿಯಮ ಜಾರಿಗೆ ತರಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಈ ಮಹಾ ಸಮಾವೇಶ ಮತ್ತು ಸೈಕಲ್ ಜಾಥಾ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾಳೆ (ಅ.27) ಕಲಬುರಗಿಯಲ್ಲಿ ನಡೆಯಲಿರುವ ಸಾರಿಗೆ ನೌಕರರ ಕೂಟದ ಸಮಾವೇಶದಲ್ಲಿ ಸಾವಿರಾರು ನೌಕರರು ಮತ್ತು ಅವರ ಸ್ನೇಹಿತರು, ಕುಟುಂಬದವರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.