ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ನೀಡಿರುವ ಬಂದ್‌ಗೆ (Karnataka Bandh) ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ರಸ್ತೆ ತಡೆ ನಡೆಸಿ, ರಾಜಕೀಯ ನಾಯಕರ ಪ್ರತಿಕೃತಿ ದಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಾಜ್ಯ ಸರ್ಕಾರ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರ್ನಾಟಕ ಬಂದ್‌ಗೆ ಸಹಕಾರವನ್ನು ನೀಡದೆ ಪೊಲೀಸರ ಮೂಲಕ ಹೋರಾಟಗಾರರನ್ನು ವಶಕ್ಕೆ ಪಡೆಯುತ್ತಿದೆ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಇದೇ ವೇಳೆ ಕನ್ನಡ ಒಕ್ಕೂಟ ನಾಯಕ ವಾಟಾಳ್ ನಾಗರಾಜ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂದ್‌ಗೆ ಸರ್ಕಾರದಿಂದ ವಿರೋಧ ಇದೆ. ಪೊಲೀಸರಿಗೆ ಒತ್ತಡ ಹಾಕಿದೆ. ಇದೀ ಕರ್ನಾಟಕ ಇದೀಗ ಪೊಲೀಸ್ ರಾಜ್ಯವಾಗಿದೆ. ಬೆಂಗಳೂರು ಒಂದಕ್ಕೆ 50 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಇಡೀ ಕರ್ನಾಟಕಕ್ಕೆ ಲಕ್ಷಾಂತರ ಪೊಲೀಸ್ ಹಾಕಿ ಸರ್ಕಾರವೇ ಬಂದ್ ಮಾಡುತ್ತಿದೆ. ನಾವು ಕಾವೇರಿ ಹೋರಾಟಕ್ಕೆ ಬಂದ್ ಮಾಡಿದ್ರೆ, ಸರ್ಕಾರ ಪೊಲೀಸ್ ಹಾಕಿ ಬಂದ್ ಮಾಡ್ತಿದೆ ಎಂದು ನಗರದ ಟೌನ್‌ಹಾಲ್ ಬಳಿ ಅಸಮಾಧಾನ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಬುರ್ಖಾ ಧರಿಸಿ, ಖಾಲಿ ಕೊಡ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾದ ವಾಟಾಳ್ ನಾಗರಾಜ್, ಮಹಿಳೆಯರ ಪರವಾಗಿ, ನ್ಯಾಯ, ಸತ್ಯದ ಪರವಾಗಿ ಒತ್ತಾಯಿಸಿ ಖಾಲಿ ಕೊಡ ಕೈಯಲ್ಲಿ ಹಿಡಿದು ಕಾವೇರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.
ಸರ್ಕಾರ ಏನೇ ಮಾಡಿದರು ನಾವು ಕರೆಕೊಟ್ಟ ಬಂದ್ ಇಡೀ ರಾಜ್ಯಾದ್ಯಂತ ಯಶಸ್ವಿ ಕಂಡಿದೆ. ಇಡೀ ನಾಡಿನ ಜನತೆಯನ್ನು ಈ ಮೂಲಕ ಅಭಿನಂದಿಸುತ್ತೇನೆ. ಅಖಂಡ ಕರ್ನಾಟಕ ಹೆಸರನ್ನು ಕನ್ನಡಿಗರು ಉಳಿಸಿ, ಗೌರವ ತಂದಿದ್ದಾರೆ. ಆದರೆ, ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲೆಂದರಲ್ಲಿ ಬಂಧನ ಮಾಡ್ತಿದ್ದಾರೆ ಮತ್ತು ಎಲ್ಲಂದರಲ್ಲಿ ಹಿಡಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾವೇರಿ ನೀರು ಬಿಡಬಾರದು. ನಮ್ಮ ಅನೇಕ ಸಂಘಟನೆಗಳು ಸಮುದಾಯ ಹೋರಾಟದ ಹಿನ್ನೆಲೆ ಇರೋರು ಹೋರಾಟ ಮಾಡ್ತಿದ್ದಾರೆ. ಪ್ರವೀಣ್ ಶೆಟ್ಟಿ ಅವರನ್ನೂ ಬಂಧನ ಮಾಡಿದ್ದಾರೆ. ಮೆರವಣಿಗೆಯನ್ನು ತಡೆದಿದ್ದಾರೆ. ಎಲ್ಲೆಡೆ 144 ಸೆಕ್ಷನ್ ಹಾಕಿದ್ದಾರೆ. ನಮ್ಮ ರಾಜ್ಯವನ್ನು ಪೊಲೀಸ್ ರಾಜ್ಯ ಮಾಡಿರೋದು ಸರಿಯಲ್ಲ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಟಾಳ್ ನಾಗರಾಜ್ ವಶಕ್ಕೆ: ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ಗೆ ಕರೆದೊಯ್ದುರು. ಫ್ರೀಡಂ ಪಾರ್ಕ್ನಲ್ಲೇ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೋಗಿ ಇದ್ದಾರೆ ಎಂದ ತಕ್ಷಣ ಬಸ್ ಬಿಟ್ಟ ಹೋರಾಟಗಾರ: ಧಾರವಾಡದ ಜುಬಲಿ ವೃತ್ತದಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದ ಹೋರಾಗಾರರೊಬ್ಬರು, ಬಸ್‌ನಲ್ಲಿ ರೋಗಿ ಇದ್ದಾರೆ ಎಂಬುದನ್ನು ತಿಳಿದ ತಕ್ಷಣ ಬಸ್ ಬಿಟ್ಟಿದ್ದಾರೆ. ಕರ್ನಾಟಕ ಬಂದ್‌ಗೆ ಕರೆ ನೀಡಿದರೂ ಬಸ್ ಓಡಾಟ ಇರುವುದನ್ನು ಕಂಡ ಹೋರಾಟಗಾರ, ಅದನ್ನು ತಡೆದರು. ಬಸ್ ಹೋಗಲು ಬಿಡುವುದಿಲ್ಲ, ಹೋರಾಟಗಾರರನ್ನು ಕರೆಯುತ್ತೇನೆ ಎಂದು ಪಟ್ಟು ಹಿಡಿದರು. ಪೊಲೀಸರು ಎಷ್ಟು ಮನವೊಲಿಸಿದರೂ ಹೋರಾಟಗಾರ ಕೇಳಲಿಲ್ಲ. ಆದರೆ, ಬಸ್‌ನಲ್ಲಿದ್ದ ವೃದ್ಧೆಯೊಬ್ಬರು ಕೆಳಗಿಳಿದು, ಬಸ್‌ನಲ್ಲಿ ರೋಗಿ ಇದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು. ಇದಾದ ಬಳಿಕ ಬಸ್ ತೆರಳಲು ಪ್ರತಿಭಟನಾಕಾರ ಬಿಟ್ಟರು.
ಆಟೋ ಚಾರ್ಜ್ ಕೊಡಲು ಮುಂದಾದ ಪ್ರತಿಭಟನಾಕಾರರು: ಚಾಮರಾಜನಗರದಲ್ಲಿ ವೃದ್ಧರೊಬ್ಬರು ಮೆಡಿಕಲ್ ಶಾಪ್‌ಗೆ ತೆರಳಿ, ಔಷಧ ಖರೀದಿಸಿ ವಾಪಸ್ ಸಿಮ್ಸ್ ಆಸ್ಪತ್ರೆಗೆ ತೆರಳಲು ಪ್ರತಿಭಟನಾಕಾರರು ಅನುಕೂಲ ಮಾಡಿಕೊಟ್ಟಿದ್ದಾರೆ. ಸಿಮ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ಆಗಿರುವ ಪೇಷಂಟ್ ಇದ್ದಾರೆ. ಅವರಿಗೆ ಔಷಧ ಕೊಡಬೇಕು, ಬಸ್ ಬಿಡಿ ಎಂದು ಹನೂರು ತಾಲೂಕಿನ ಮಾದೇಗೌಡ ಎಂಬುವರು ಮನವಿ ಮಾಡಿದ್ದಾರೆ. ಆಗ, ಬಸ್ ಇಲ್ಲ, ಆಟೋದಲ್ಲಿ ತೆರಳಿ ಎಂದು ಕನ್ನಡ ಹೋರಾಟಗಾರರು ಸೂಚಿಸಿದ್ದಾರೆ. ಅಲ್ಲದೆ, 100 ರೂ. ಕೊಡಲು ಕೂಡ ಮುಂದಾಗಿದ್ದಾರೆ. ಆಗ, ಮಾದೇಗೌಡರು, ನನಗೆ ಹಣ ಬೇಡ, ಹೋಗಲು ಬಿಟ್ಟರೆ ಸಾಕು ಎಂದಿದ್ದಾರೆ. ಬಳಿಕ ಅವರು ಆಟೋದಲ್ಲಿ ಹೋಗಲು ಹೋರಾಟಗಾರರು ಬಿಟ್ಟಿದ್ದಾರೆ.
ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಹಲವೆಡೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿಕೃತಿ ದಹನ ಮಾಡಲಾಗಿದೆ. ಹಾಗೆಯೇ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮತ್ತೊಂದೆಡೆ, ಯಾದಗಿರಿಯಲ್ಲಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಯತ್ನವೂ ನಡೆದಿದೆ. ಪ್ರಾಣ ಕೊಟ್ಟೇವು, ಕಾವೇರಿ ನದಿ ನೀರು ಬಿಡೆವು ಎಂಬ ಘೋಷಣೆಗಳೊಂದಿಗೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪ್ರತಿಭಟನಾನಿರತರ ಮೇಲೆ ಖಾಕಿ ಪ್ರಹಾರ ಕೂಡ ಹೆಚ್ಚಾಗಿದ್ದು, ಹೊರಾಟಗಾರರನ್ನು ಬಂಧಿಸುತ್ತಿದ್ದಾರೆ.