- KKRTC: ನಿರ್ವಾಹಕ, ಚಾಲಕರ ಮೇಲೆ ಹಲ್ಲೆ ಮಾಡಿದ ಆರೋಪಿ ಹೆಡೆಮುರಿಕಟ್ಟಿದ ಪೊಲೀಸರು
- ಹಲ್ಲೆಗೊಳಗಾದ ನೌಕರರ ಭೇಟಿ ಮಾಡಿ ಸೌಜನ್ಯಕ್ಕಾದರೂ ಆರೋಗ್ಯ ವಿಚಾರಿಸದ ಡಿಸಿ ನಡೆಗೆ ಅಸಮಾಧಾನ
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬೀದರ್ ವಿಭಾಗದ ಹುಮನಾಬಾದ್ ಘಟಕದ ಬಸ್ ನಿರ್ವಾಹಕ ಮತ್ತು ಚಾಲಕರ ಮೇಲೆ ಕಲ್ಲಿನಿಂದ ಹೊಡೆದು ತೀವ್ರ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ 31ರ ಸಂಜೆ 6.45ರಲ್ಲಿ ಬ್ಯಾಲಹಳ್ಳಿಯ ನಿವಾಸಿ ಪೌಲ ಎಂಬಾತ ನಿರ್ವಾಹಕ ಪ್ರಕಾಶ್ ಎಂಬುವರ ಮೇಲೆ ಏಕಾಏಕಿ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಹಲ್ಲೆಗೊಳಗಾದ ಪ್ರಕಾಶ್ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು ಚಾಲಕ ಪವಡಪ್ಪ ಚನ್ನಪ್ಪ ಚಲವಾದಿ ಅವರ ಗುಪ್ತಂಗಕ್ಕೆ ಒದ್ದಿದ್ದರಿಂದ ಈಗಲೂ ಅವರ ಗುಪ್ತಂಗದ ಒಂದು ಭಾಗ ಈಗಲೂ ಊದಿಕೊಂಡಿದ್ದು ನಡೆಯಲು ಕಷ್ಟವಾಗುತ್ತಿದೆ. ಈ ನಡುವೆಯೂ ಸದ್ಯ ಪವಡಪ್ಪ ಅವರಿಗೂ ಸೂಕ್ತ ಚಿಕಿತ್ಸೆ ನೀಡಿರುವ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ.
ಈ ನಡುವೆ ಕರ್ತವ್ಯ ನಿರತ ಸಾರಿಗೆ ನೌಕರರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಧನ್ನೂರ್ ಪೊಲೀಸರು, ವಿಚಾರಣೆಗೊಳ್ಳಪಡಿಸಿದ್ದಾರೆ.
ಅಮ್ಮನ ಹೃದಯದ ಡಿಎಂ: ತಮ್ಮ ಘಟಕದ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹುಮನಾಬಾದ್ ಘಟಕದ ವ್ಯವಸ್ಥಾಪಕರಾದ ಗುರುಬಸಮ್ಮ ಅವರು ಕೂಡಲೇ ಸ್ಥಳಕ್ಕೆ ಹೋಗಿ ನೌಕರರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಹಲ್ಲೆಗೊಳಗಾಗಿದ್ದರಿಂದ ನೌಕರರಿಗೆ ಜ್ವರ ಏನಾದರು ಬಂದಿದೆಯೇ ಎಂದು ಸ್ವತಃ ಹಣೆ ಮುಟ್ಟಿ ನೋಡಿ ಸ್ವಂತ ಕುಟುಂಬದವರ ತರ ನೋಡಿಕೊಂಡಿದ್ದಾರೆ.
ಅಲ್ಲದೆ ತಮ್ಮ ಡ್ಯೂಟಿ ಮುಗಿದಿದ್ದರಿಂದ ಮನೆಯಲ್ಲಿರಬೇಕಾದ ಸಮಯದಲ್ಲಿ ಅಂದರೆ ರಾತ್ರಿ 11 ಗಂಟೆಯಿಂದ ಮುಂಜಾನೆ 3 ಗಂಟೆವರೆಗೂ ನೌಕರರ ಜತೆಗಿದ್ದು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಮನೆಗೆ ತೆರಳಿದ್ದಾರೆ. ಈ ನಡುವೆ ಸಾರಿಗೆ ವಾಹನದಲ್ಲೇ ನೌಕರರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ನೌಕರರ ನೋವಿಗೆ ಸ್ಪಂದಿಸಿದರು ಎಂದು ಘಟಕದ ಸಿಬ್ಬಂದಿ ತಿಳಿಸಿದ್ದಾರೆ.
ಇನ್ನು ಬೀದರ್ ವಿಭಾಗದ ವಿಭಾಗೀಯ ನಿಯಂತ್ರನಾಧಿಕಾರಿ ಚಂದ್ರಕಾಂತ್ ಫುಲೇಕರ್ ಹೊರತುಪಡಿಸಿ ಬಹುತೇಕ ವಿಭಾಗದ ಎಲ್ಲ ಅಧಿಕಾರಿಗಳು ಹಲ್ಲೆ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿ ನೌಕರರ ಆರೋಗ್ಯ ವಿಚಾರಿಸಿದ್ದು, ಅಲ್ಲದೆ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಾಗುವವರೆಗೂ ಇದ್ದರು.
ಅಧಿಕಾರಿಗಳ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿ ನಾಲ್ಕೂ ನಿಗಮಗಳ ಪ್ರತಿ ಘಟಕ, ವಿಭಾಗದ ಅಧಿಕಾರಿಗಳು ನೌಕರರಿಗೆ ಸ್ಪಂದಿಸಬೇಕು. ಸಾರ್ವಜನಿಕರಿಂದ ತೊಂದರೆ ಆದ ಕೂಡಲೇ ಅದರ ತೀವ್ರತೆ ನೋಡಿಕೊಂಡು ಸ್ಥಳಕ್ಕಾಗಮಿಸಿದರೆ ನೌಕರರಿಗೂ ಬಲ ಬಂದಂತಾಗುತ್ತದೆ. ಅಲ್ಲದೆ ಇನ್ನು ಉತ್ಸಾಹದಿಂದ ಸೇವೆ ಮಾಡುವುದಕ್ಕೆ ಇತರ ನೌಕರರಿಗೂ ಇನ್ನಷ್ಟು ಬಲ ಬರುತ್ತದೆ.
ಹಲ್ಲೆಗೊಳಗಾದ ನೌಕರರ ಸೌಜನ್ಯಕ್ಕೂ ಭೇಟಿ ಮಾಡದ ಡಿಸಿ: ಇನ್ನು ಇಬ್ಬರು ನೌಕರರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಅವರಲ್ಲಿ ನಿರ್ವಾಹಕರ ತಲೆಗೆ 5-6 ಹೊಲಿಗೆ ಬಿದ್ದಿದ್ದರೂ ಕೂಡ ಸೌಜನ್ಯಕ್ಕೂ ಬಂದು ಭೇಟಿ ಮಾಡಿ KKRTC ಬೀದರ್ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ್ ಫುಲೇಕರ್ ಆರೋಗ್ಯ ವಿಚಾರಿಸಿಲ್ಲ. ಇದು ಒಬ್ಬ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಹುಮನಾಬಾದ್ ಘಟಕದ ಟಿಐ ಅಂಬಿಕಾ ಅವರು ಇತ್ತ ಹಲ್ಲೆಗೊಳಗಾಗಿ ನೌಕರರು ಆಸ್ಪತ್ರೆಗೆ ದಾಖಲಾಗಿ ನರಳುತ್ತಿದ್ದರೆ. ಅತ್ತ ನೀವು ಆಸ್ಪತ್ರೆಯಲ್ಲಿದ್ದರೆ ನಾವು ಬೇರೆಯರವನ್ನು ಕೂಡಲೇ ಹೇಗೆ ರೂಟ್ ಮೇಲೆ ಕಳಿಸಿಕೊಡಲಾಗುತ್ತದೆ. ಹೇಗೋ ಕೆಲಸ ಮುಗಿಸಿಕೊಂಡು ಬರಬೇಕು ಎಂದು ನೌಕರರಿಗೆ ತಾಕೀತು ಮಾಡಿದರಂತೆ. ನೋಡಿ ಇವರಿಗೇ ರೀತಿ ಹಲ್ಲೆಯಾದರೆ ಇವರು ಆಸ್ಪತ್ರೆಗೆ ಹೋಗದೆ ಡ್ಯೂಟಿಗೆ ಬರುತ್ತಾರೆಯೇ? ಈ ರೀತಿ ಮಾನವೀಯತೆ ಇಲ್ಲದ ರೀತಿಯಲ್ಲಿ ಟಿಐ ಅಂಬಿಕಾ ನಡೆದುಕೊಳ್ಳಬಾರದು. ಇನ್ನಾದರೂ ನೌಕರರಿಂದ ನಾವು ಎಂಬುದನ್ನು ಅರಿತು ನಡೆದುಕೊಂಡು ಅವರ ನೋವಿಗೆ ಸ್ಪಂದಿಸಬೇಕಿದೆ.
ಘಟನೆ ಏನು: ಮೇ 31ರಂದು ಬೀದರ ಹುಬ್ಬಳಿ ಮಾರ್ಗದ ನಡುವೆ ಕಾರ್ಯಾಚರಿಸುತ್ತಿದ್ದ ಹುಮನಾಬಾದ್ ಘಟಕದ ಬಸ್ ಬ್ಯಾಲಹಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದೆ. ಈ ವೇಳೆ ಬಸ್‌ನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಚಿಲ್ಲರೆ ಕೊಡುತ್ತಿದ್ದ ನಿರ್ವಾಹಕ ಪ್ರಕಾಶ್ ಜತೆ ಒಬ್ಬಾತ ಚಿಲ್ಲದರೆ ವಿಚಾರದಲ್ಲಿ ವಾಗ್ವಾದ ಮಾಡುತ್ತಿದ್ದ. ಇದನ್ನು ನೋಡಿದ ನಿಲ್ದಾಣದಲ್ಲೇ ಇದ್ದ ಪೌಲ ಎಂಬಾತ ಏಕಾಏಕಿ ಬಂದು ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಬಿಡಿಸಲು ಹೋದ ಚಾಲಕ ಪವಡಪ್ಪ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಧನ್ನೂರು ಪೊಲೀಸ್ ಠಾಣೆಯಲ್ಲಿ ಜೂನ್ 1ರಂದು ಅಂದರೆ ನಿನ್ನೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.