Vijayapatha – ವಿಜಯಪಥ
Friday, November 1, 2024
NEWSನಮ್ಮರಾಜ್ಯಬೆಂಗಳೂರು

KKRTC – 23 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕನ ವಜಾ, ಆತ ಮೃತಪಟ್ಟರೂ ಗ್ರಾಚ್ಯುಟಿ, ಪಿಎಫ್‌ ಹಣ ನೀಡದೇ ಕಾಡುತ್ತಿರುವ ಭ್ರಷ್ಟ ಅಧಿಕಾರಿಗಳು

ಹಣ ಕೊಡದೆ ಸತಾಯಿಸುತ್ತಿರುವುದಲ್ಲದೇ 1.60 ಲಕ್ಷ ರೂಪಾಯಿಯಲ್ಲಿ 65 ಸಾವಿರ ರೂ. ಕಡಿತಮಾಡುತ್ತೇವೆ ಎಂದ ಭ್ರಷ್ಟರು ಕೊಟ್ಟ ಕಾರಣ ಏನುಗೊತ್ತಾ..

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ನ್ಯಾಯಯುತವಾಗಿ ಕೊಡಬೇಕಿರುವುದರ ಬಗ್ಗೆ ಮಾಹಿತಿ ಕಲೆಹಾಕಿದ  ನೌಕರರ ಕೂಟದ ಗೌರವ ಸಲಹೆಗಾರ   ಬಿ.ಎನ್‌. ಹುಂಡೇಕಾರ 

ವಿಜಯಪುರ: ಅನಾರೋಗ್ಯಕ್ಕೆ ತುತ್ತಾಗಿ ಡ್ಯೂಟಿಗೆ ಹೋಗಲಾಗದೆ ವೈದ್ಯಕೀಯ ಪ್ರಮಾಣ ಪತ್ರ (Medical certificate) ಕೊಟ್ಟರೂ ಅದನ್ನು ಕೇರ್‌ ಮಾಡದೆ ಚಾಲಕರೊಬ್ಬರನ್ನು 2000ರಲ್ಲಿ ವಜಾಗೊಳಿಸಿದ್ದಾರೆ ಅಂದು ಇದ್ದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಮಾನವೀಯತೆಯೇ ಇಲ್ಲದೆ ಇಂಥ ಅಧಿಕಾರಿಗಳ ನಡೆಯಿಂದ ಅದೆಷ್ಟು ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬಂದಿವೆಯೋ ಗೊತ್ತಿಲ್ಲ. ಆದರೆ, ಇದನ್ನು ಕೇಳಬೇಕಾದ ಸಂಘಟನೆಗಳು ಮೌನವಾಗಿದ್ದು ಏಕೆ ಎಂಬ ಪ್ರಶ್ನೆಗೆ 23ವರ್ಷ ಕಳೆಯುತ್ತ ಬಂದರೂ ಉತ್ತರ ಸಿಕ್ಕಿಲ್ಲ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಅಂದಿನ NEKRT)ದ ವಿಜಯಪುರ ವಿಭಾಗದ ಇಂಡಿ ಘಟಕದಲ್ಲಿ ಚಾಲಕರಾಗಿ 2000ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್‌ ವಿ.ಅನ್ನಪ್ಪನವರನ್ನು ದೀರ್ಘಕಾಲ ಗೈರುಹಾಜರಾಗಿದ್ದಾರೆ ಎಂಬ ಕಾರಣ ನೀಡಿ ಕೆಲಸದಿಂದ ವಜಾಗೊಳಿಸಲಾಯಿತು. ಇದಕ್ಕೂ ಮೊದಲು ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಅನ್ನಪ್ಪನವರು Medical certificate ತಂದು ಕೊಟ್ಟಿದ್ದಾರೆ. ಆದರೆ, ಅದಾವುದನ್ನು ಲೆಕ್ಕಿಸದ ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕ ಅನ್ನಪ್ಪನವರನ್ನು ವಜಾ ಮಾಡಿ ಆದೇಶ ಹೊರಡಿಸಿದರು.

ಇನ್ನು ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ನಪ್ಪನವರು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುವಷ್ಟು ಆರ್ಥಿಕವಾಗಿ ಶಕ್ತನಾಗಿರಲಿಲ್ಲ. ಹೀಗಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾದರು. ಇತ್ತ ದುಡಿಮೆಯೂ ಇಲ್ಲದೆ ಹೆಂಡತಿ ಮಕ್ಕಳು ಹೊತ್ತಿನ ಕೂಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಇದರ ನಡುವೆ ವಜಾಗೊಂಡ ಬಳಿಕ ತಮಗೆ ಸಂಸ್ಥೆಯಿಂದ ಬರಬೇಕಿದ್ದ ಹಣಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಸಂಸ್ಥೆಯ ವಿಭಾಗೀಯ ಕಚೇರಿಗೆ ಸುಮಾರು 21ವರ್ಷಗಳ ಕಾಲ ಅಲೆದು ಅಲೆದು ಸುಸ್ತಾದರು. ಆದರೂ ನೀಚ ಅಧಿಕಾರಿಗಳು ಅನ್ನಪ್ಪನವರಿಗೆ ಕಾನೂನು ಬದ್ಧವಾಗಿ ಬರಬೇಕಿರುವ ಗ್ರಾಚ್ಯುಟಿ ಮತ್ತು ಪಿಎಫ್‌ ಹಣವನ್ನು ಕೊಡಲೇ ಇಲ್ಲ.

ಇದರಿಂದ ಇನ್ನಷ್ಟು ಬಳಲಿದ ಅನ್ನಪ್ಪನವರು ಕಳೆದ 2021ರಲ್ಲಿ ಮೃತಪಟ್ಟರು. ಆದರೂ ಇವರಿಗೆ ಸೇರಬೇಕಾದ ಹಣ ಮಾತ್ರ ಈವರೆಗೂ ಬಿಡುಗಡೆಯಾಗಿಯೇ ಇಲ್ಲ. ಇದು ಎಂಥ ದುರಂತ ನೋಡಿ. ಸಂಸ್ಥೆಯ ಲೆಕ್ಕಾಧಿಕಾರಿ ಸ್ಥಾನದಲ್ಲಿರುವವನಿಗೆ ಏನು ಕೆಲಸ? ಯಾರ ಲೆಕ್ಕವನ್ನು ಹೇಗೆ ಪೂರ್ಣಮಾಡಬೇಕು. ಯಾರು ಏನಾಗಿದ್ದಾರೆ ಎಂಬುದನ್ನು ತಿಳಿದು ಅವರಿಗೆ ಹಣವನ್ನು ಸಂದಾಯ ಮಾಡುವುದು ಬಿಟ್ಟು ಇನ್ನೇನು ಕೆಲಸವಿರುತ್ತದೆ?

ಇಂಥ ನಾಲಾಯಕ್‌ ಅಧಿಕಾರಿಗಳು ನಿತ್ಯ ಬಂದು ಕುರ್ಚಿಯಲ್ಲಿ ಕುಳಿತು ಹೋದರೆ ಆಯಿತು. ಅವರಿಗೆ ಬರುವ ಸಂಬಳ ತಿಂಗಳಿಗೆ ಬಂದು ಬಿಡುತ್ತದೆ. ಆದರೆ ಇವರಿಂದ ಆಗಬೇಕಿರುವ ಕೆಲಸ ಮಾತ್ರ ಏನೂ ಆಗಿರುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಾ?

ಇನ್ನು ನೋಡಿ 2000ದಲ್ಲಿ ವಜಾಗೊಂಡ ಚಾಲಕ ಅನ್ನಪ್ಪನವರ 2021ರವರೆಗೂ ತಮಗೆ ಬರಬೇಕಿರುವ ಹಣಕ್ಕಾಗಿ ಅಲೆದು ಅಲೆದು ಕೊನೆಗೆ ಅದನ್ನು ಪಡೆಯಲಾಗದೇ ಅಸುನೀಗಿದರು. ಆ ಬಳಿಕ ಅವರ ಪತ್ನಿ ಶಾರದಾ ಬಾಯಿ ಅವರು, ಈವರೆಗೂ ಅಲೆಯುತ್ತಲೇ ಇದ್ದಾರೆ. ಆದರೆ ಅವರನ್ನೂ ಕೂಡ ಕಚೇರಿಗೆ ಅಲೆಸುತ್ತಿದ್ದಾರೆಯೇ ಹೊರತು, ಅವರಿಗೆ ಸೇರಬೇಕಿರುವ ಹಣವನ್ನು ಬಿಡುಗಡೆ ಮಾಡುತ್ತಿಲ್ಲ.

ಇನ್ನು ಈ ವಿಷಯ ತಿಳಿದ ಬಿಜೆಪಿಯ ಅಲ್ಪ ಸಂಖ್ಯಾತರ ವಿಭಾಗ ವಿಜಯಪುರ ಜಿಲ್ಲೆಯ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನೌಕರರ ಕೂಟದ ಗೌರವ ಸಲಹೆಗಾರರೂ ಆದ ಬಿ.ಎನ್‌. ಹುಂಡೇಕಾರ ಅವರು ಈ ಬಗ್ಗೆ ಮಾಹಿತಿ ಕಲೆಹಾಕಿದ್ದು, ಈವರೆಗೂ ಅನ್ನಪ್ಪನವರ ಕುಟುಂಬಕ್ಕೆ ಹಣ ಬಿಡುಗಡೆ ಮಾಡದಿರುವ ಬಗ್ಗೆ ಕಿಡಿಕಾರಿದ್ದಾರೆ.

ಅಲ್ಲದೆ ವಜಾಗೊಂಡು ಬಳಿಕ ಮೃತಪಟ್ಟ ಚಾಲಕ ಅನ್ನಪ್ಪನವರ ಕುಟುಂಬ ಆರ್ಥಿಕವಾಗಿ ತುಂಬ ಸಮಸ್ಯೆಯಲ್ಲಿದೆ ಎಂಬುದನ್ನು ಅರಿತ ಹುಂಡೇಕಾರ ಅವರು ತಮ್ಮ ಸ್ವಂತ ಸುಮಾರು 5 ಸಾವಿರ ಹಣವನ್ನು ಖರ್ಚುಮಾಡಿ ಎಲ್ಲ ದಾಖಲೆಗಳನ್ನು ತೆಗೆಸಿದ್ದಾರೆ. ಆದರೂ ಅಧಿಕಾರಿಗಳು ಇನ್ನು ನೌಕರನ ಕುಟುಂಬಕ್ಕೆ ಬರಬೇಕಾದ ಹಣವನ್ನು ಬಿಡುಗಡೆ ಮಾಡಿಲ್ಲ.

ಇನ್ನು ಈ ಬಗ್ಗೆ ಮಾಹಿತಿ ಕೇಳಿದ ಹುಂಡೇಕಾರ ಅವರಿಗೆ ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಲೆಕ್ಕಾಧಿಕಾರಿಗಳು ಹೌದು! 02-05-2000ರಂದು ಸಂಸ್ಥೆಯ ಸೇವೆಯಿಂದ ವಜಾಗೊಂಡಿದ್ದು, ಇವರ ಉಪಧನ ಅಭ್ಯರ್ಥನ ತಯಾರಿಸಿ ಪರಿಶೋಧನೆಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಈ ಪತ್ರದೊಂದಿಗೆ ಲಗತ್ತಿಸಿ ಸೇವಾ ಪುಸ್ತಕದೊಂದಿಗೆ ಕಳುಹಿಸಲಾಗಿದೆ ಎಂದು ಇದೇ ಮಾರ್ಚ್‌ 23 -2023ರಂದು ಮಾಹಿತಿ ನೀಡಿದ್ದಾರೆ.

ಇನ್ನು ಅಚ್ಚರಿಯ ವಿಷಯವೆಂದರೆ, ವಜಾಗೊಂಡ ಚಾಲಕ ಅನ್ನಪನವರ ಅವರಿಗೆ ಅಂದಾಜು 1 ಲಕ್ಷದ 60 ಸಾವಿರ ರೂಪಾಯಿ ಹಣ ಬರಬೇಕಿದೆ. ಆದರೆ, ಈ ವರೆಗೂ ಅದನ್ನು ಕೊಡದೆ ಇಟ್ಟುಕೊಂಡಿದ್ದಕ್ಕೆ ಸಂಸ್ಥೆಯ ಅಧಿಕಾರಿಗಳೇ ಬಡ್ಡಿಹಾಕಿದ್ದು, 1.60 ಲಕ್ಷ ರೂಪಾಯಿಯಲ್ಲಿ 95 ಸಾವಿರ ರೂಪಾಯಿ ಬರುತ್ತದೆ ಎಂದು ಹೇಳಿದ್ದಾರಂತೆ.

ಉಳಿದ 65 ಸಾವಿರ ರೂಪಾಯಿ ಏಕೆ ಕೊಡುತ್ತಿಲ್ಲ ಎಂದು ಚಾಲಕನ ಪತ್ನಿ ಶಾರದಾ ಬಾಯಿ ಅವರು ಅಧಿಕಾರಿಗಳನ್ನು ಕೇಳಿದರೆ ಇಷ್ಟು ದಿನ ನಾವು ನಿಮ್ಮ ಹಣವನ್ನು ಜೋಪಾನವಾಗಿ ಇಟ್ಟು ಕಾಪಾಡಿಕೊಂಡು ಬಂದಿರುವುದಕ್ಕೆ ನಾವು ನಿಮ್ಮಿಂದ ಬಡ್ಡಿರೂಪದಲ್ಲಿ ಇಟ್ಟುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮಾಡಬೇಕಾದ ಕೆಲಸ ಮಾಡದೆ ಹರ್ಟೆಹೊಡೆದುಕೊಂಡು ಕೂರುವ ನಾಲಾಯಕ್‌ ಅಧಿಕಾರಿಗಳು ಸತ್ತ ಹೆಣವನ್ನು ಕಿತ್ತು ತಿನ್ನುವ ರಣಹದ್ದುಗಳಾಗಿ ಕಾಡುತ್ತಿದ್ದಾರೆ. ಈ ಶಾರದಾ ಬಾಯಿ ಅವರಂತೆ ಇನ್ನು ಎಷ್ಟು ಜನ ಈ ಭ್ರಷ್ಟ ಅಧಿಕಾರಿಗಳ ನಡೆಯಿಂದ ಕಾನೂನಾತ್ಮಕವಾಗಿ ಪಡೆಯಬೇಕಿರುವುದನ್ನು ಪಡೆಯದೆ ತಮ್ಮ ಚಪ್ಪಲಿಗಳನ್ನು ಸವೆಸುತ್ತಿದ್ದಾರೋ ಗೊತ್ತಿಲ್ಲ.

ಇದಕ್ಕೆ ಸಂಬಂಧಪಟ್ಟ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಇಂಥ ಅಧಿಕಾರಿಗಳನ್ನು ಮೊದಲು ಅಮಾನತು ಮಾಡಿ ಕಳೆದ 23 ವರ್ಷಗಳಿಂದ ಕಚೇರಿಗೆ ಅಲೆಯುತ್ತಿರುವ ವಜಾಗೊಂಡ ಮತ್ತು ಮೃತ ಚಾಲಕ ಅನ್ನಪ್ಪನವರ ಕುಟುಂಬಕ್ಕೆ ಸೇರಬೇಕಿರುವ ಹಣವನ್ನು ಬಿಡುಗಡೆ ಮಾಡಲು ಆದೇಶ ನೀಡಬೇಕಿದೆ ಎಂದು ಹುಂಡೇಕಾರ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ