
ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಪಟ್ಟಿರುವ ಘಟನೆ ಇಂದು ಆಂಧ್ರಪ್ರದೇಶದ ಪೆದ್ದ ತುಂಬಲಂ ಬಳಿ ನಡೆದಿದೆ.
ಕೆಕೆಆರ್‌ಟಿಸಿ ಗಂಗಾವತಿ ಘಟಕದ ಗಂಗಾವತಿ – ಮಂತ್ರಾಲಯ ಮಾರ್ಗಾಚೆಣೆ ಮಾಡುತ್ತಿದ್ದ ಬಸ್ ಆಂಧ್ರಪ್ರದೇಶದ ಪೆದ್ದ ತುಂಬಲಂ ಬಳಿ ಎದುರಿಗೆ ಬರುತ್ತಿದ್ದ ಬೈಕ್‌ಗಳಿಗೆ ಡಿಕ್ಕಿಯಾಗಿ ಸ್ಥಳದಲ್ಲಿಯೇ 5 ಬೈಕ್ ಸವಾರರು ಮೃತಪಟ್ಟಿದ್ದಾರೆ.
ಮಾನ್ವಿ ಮೂಲದ ಹೇಮಾದ್ರಿ (55), ಪತ್ನಿ ನಾಗರತ್ನಮ್ಮ (44), ಪುತ್ರ ದೇವರಾಜು(24), ಆದೋನಿ ತಾಲೂಕಿನ ಕುಪ್ಪಗಲ್ಲು ಗ್ರಾಮದ ಪತಿ ಈರಣ್ಣ (40), ಪತ್ನಿ ಆದಿಲಕ್ಷ್ಮಿ (30) ಮೃತರು.
ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಬಸ್ ಗಂಗಾವತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಅದೇ ಮಾರ್ಗದಲ್ಲಿ ಮಾನ್ವಿ ಮೂಲದ ಹೇಮಾದ್ರಿ ಕುಟುಂಬ ತೆರಳುತ್ತಿತ್ತು. ಮತ್ತೊಂದು ಬೈಕ್‌ನಲ್ಲಿ ಕುಪ್ಪಗಲ್ಲು ಗ್ರಾಮದ ಕಡೆಗೆ ಈರಣ್ಣ ಕುಟುಂಬ ಹೋಗುತ್ತಿತ್ತು. ಈ ವೇಳೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ 5 ಮಂದಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನೂ, ಕೆಕೆಆರ್‌ಟಿಸಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆದೋನಿ ಪೊಲೀಸರು ಹಾಗೂ ಕೆಕೆಆರ್‌ಟಿಸಿ ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆದೋನಿ ಸರ್ಕಾರಿ ಆಸ್ಪತ್ರೆಗೆ ರವಾಸಿದ್ದಾರೆ.