NEWSಉದ್ಯೋಗನಮ್ಮರಾಜ್ಯ

KKRTC ಕಂಡಕ್ಟರ್‌ ಮಗ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರ‍್ಯಾಂಕ್‌

ವಿಜಯಪಥ ಸಮಗ್ರ ಸುದ್ದಿ

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರ ಮಗ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರ‍್ಯಾಂಕ್‌ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ತಾಲೂಕಿನ ಕರಡಕಲ್ ಗ್ರಾಮದ ನಿವಾಸಿ, ಕೆಕೆಆರ್‌ಟಿಸಿ ಬಸ್‌ ಕಂಡಕ್ಟರ್‌ ಬಸವರಾಜ ಅವರ ಪುತ್ರ ಆನಂದಕುಮಾರ ನಾಗರಾಳ ಅವರೆ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರ‍್ಯಾಂಕ್‌ ಪಡೆಯುವ ಮೂಲಕ ಸಾಧನೆ ಮಾಡಿರುವವರು.

ಆನಂದಕುಮಾರ ಅವರ ತಂದೆ ಬಸವರಾಜ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರೆ. ತಾಯಿ ಟೇಲರಿಂಗ್ ಮಾಡುತ್ತಿದ್ದಾರೆ. ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಆನಂದಕುಮಾರ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು.

ಅವರು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಗೆ ಪ್ರವೇಶ ಪಡೆದು, 10ನೇ ತರಗತಿವರೆಗೆ ಓದಿ ಮುಂದೆ ಪಿಯುಸಿಯನ್ನು ಬಳ್ಳಾರಿಯಲ್ಲಿ ಹಾಗೂ ಬಿ.ಎಸ್‌ಸಿ, ಎಂ.ಎಸ್‌ಸಿಯನ್ನು ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ.

ಇನ್ನು ಯುಪಿಎಸ್‌ಸಿ ಪರೀಕ್ಷೆಗಾಗಿ ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಪಡೆದುಕೊಂಡು ಮೇನ್ಸ್‌ವರೆಗೂ ಹೋಗಿದ್ದರೂ ಆದರೆ ಐಎಎಸ್ ಅಧಿಕಾರಿಯಾಗುವ ಆಸೆ ಕೈಗೂಡಲಿಲ್ಲ. ಬಳಿಕ ಐಎಫ್‌ಎಸ್ ಪರೀಕ್ಷೆಯಲ್ಲಿ ಎರಡು ಪ್ರಯತ್ನದಲ್ಲಿ ವಿಫಲರಾದರು. ಆದರೂ ಛಲಬಿಡದೆ ಮತ್ತೆ ಕಠಿಣ ಪರಿಶ್ರಮದ ಮೂಲಕ ಮೂರನೇ ಪ್ರಯತ್ನದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ 41ನೇ ರ‍್ಯಾಂಕ್‌ ಗಳಿಸಿ ಆನಂದಕುಮಾರ ಗುರಿ ತಲುಪಿದ್ದಾರೆ.

ತುಂಬು ಹೃದಯದ ಧನ್ಯವಾದ: ನಮ್ಮ ಸರ್ಕಾರಿ ಆದರ್ಶ ವಿದ್ಯಾಲಯ ಲಿಂಗಸೂಗೂರ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿ ಆನಂದ ಕುಮಾರ ಯುಪಿಎಸ್‌ಸಿಯ IFS ಪರೀಕ್ಷೆಯಲ್ಲಿ 41ನೇ ರ‍್ಯಾಂಕ್‌ ಪಡೆದು ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗೆ ವಿದ್ಯಾಲಯದ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಶಾಲೆಯ ಎಚ್‌ಒಡಿ ಅಭಿನಂದಿಸಿದೆ.

ಸಾರಿಗೆ ನೌಕರರ ಶುಭಾಶಯ: ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುವ ನೀವು ತಂದೆ-ತಾಯಿ ಹಾಗೂ ಸಾರಿಗೆ ನಿಗಮಕ್ಕೆ ಹೆಸರು ತಂದಿದ್ದೀರಿ. ಜತೆಗೆ ಸಾರಿಗೆ ಸಿಬ್ಬಂದಿ, ಅಧಿಕಾರಿಗಳಿಗೂ “ಆನಂದ”ವನ್ನು ತಂದಿದ್ದೀರಿ ನಿಮಗೆ ಶುಭವಾಗಲಿ ಎಂದು ಸಾರಿಗೆ ನೌಕರರು ಶುಭಕೋರಿದ್ದಾರೆ.

Megha
the authorMegha

Leave a Reply

error: Content is protected !!