ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್‌ಸ್ಪೆಕ್ಟರ್ ಒಬ್ಬರನ್ನು ಭಾನುವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಜೈಲಿನ ಬಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್‌ಸ್ಪೆಕ್ಟರ್ ಹುಸೇನಪ್ಪ (54) ಕೊಲೆಯಾದವರು. ಹುಸೇನಪ್ಪ ಆ.6ರ ರಾತ್ರಿ 8.30ರ ಸುಮಾರಿಗೆ ಬೀದರ್‌ಗೆ ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದಾಗ ಅಪರಿಚಿತರು ಬೈಕ್‌ನಲ್ಲಿ ಬಂದು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಬೀದರ್‌ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಅವರು ಡ್ಯೂಟಿಗೆ ಹೋಗುತ್ತಿದ್ದರು. ಆದರೆ, ಮನೆಯಿಂದ ಕೂಗಳತೆ ದೂರದಲ್ಲೇ ಅವರ ಮೇಲೆ ದಾಳಿ ನಡೆದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಂತೆ ಕಿರುಚಿಕೊಂಡು ತಪ್ಪಿಸಿಕೊಳ್ಳಲು ಮನೆಯೊಂದರ ಸಮೀಪಕ್ಕೆ ಅವರು ಓಡಿಹೋದರು. ಆದರೂ ಅವರನ್ನು ಬಿಡದೆ ಬೆನ್ನಟ್ಟಿದ ಪಾಪಿಗಳು ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಹಲ್ಲೆಯಿಂದ ತೀವ್ರಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇತ್ತ ಹುಸೇನಪ್ಪ ಅವರ ಕಿರುಚಾಟ ಕೇಳಿ ಮನೆಯವರು ಹೊರಗೆ ಓಡಿಬಂದಿದ್ದಾರೆ. ಆ ವೇಳೆಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆಯವರಾದ ಹುಸೇನಪ್ಪ 20 ವರ್ಷಗಳಿಂದ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ಅವರು ಬಡ್ತಿಯ ಮೇಲೆ ಉನ್ನತ ಹುದ್ದೆಗೆ ಬಂದಿದ್ದರು. ಐದು ವರ್ಷದ ಹಿಂದೆ ಅವರಿಗೆ ಭದ್ರತಾ ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಸಿಕ್ಕಿತ್ತು.
ಹುಸೇನಪ್ಪ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಎಎಸ್‌ಪಿ ಎಂ.ಎ. ನಟರಾಜ್, ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ್ ಹಾಗೂ ಡಿಟಿಒ ಚಾಮರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಕೋರರ ಪತ್ತಗೆ ಬಲೆ ಬೀಸಿದ್ದಾರೆ.