KKRTC ಇಂಡಿ: ನಿವೃತ್ತಿ ಅಂಚಿನಲ್ಲಿರುವ ನೌಕರನಿಗೆ ಮೇಲಧಿಕಾರಿ ರಜೆ ಮಂಜೂರು ಮಾಡುತ್ತಾರೆ ಡಿಎಂ ರದ್ದು ಮಾಡುತ್ತಾರೆ!!??

- ಇವರಿಗಿಂತ ಮೇಲಧಿಕಾರಿಯೊಬ್ಬರು ಮಾಡಿರುವ ರಜೆಯನ್ನೇ ರದ್ದು ಮಾಡುತ್ತಾರೆ ಎಂದರೆ ಏನರ್ಥ
- ಕೆಕೆಆರ್ಟಿಸಿಯಲ್ಲಿ ಮೇಲಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲ ಎಂಬುವುದಕ್ಕೆ ಇದೇ ತಾಜಾ ನಿದರ್ಶನ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ಯಾಂತ್ರಿಕ ಅಭಿಯಂತರರು ನಿವೃತ್ತಿ ಅಂಚಿನಲ್ಲಿರುವ ನೌಕರನಿಗೆ 49 ದಿನಗಳವರೆಗೆ ಮಂಜೂರು ಮಾಡಿರುವ ರಜೆಯನ್ನೇ ಇತ್ತ ಇಂಡಿ ಘಟಕ ವ್ಯವಸ್ಥಾಪಕ ರದ್ದು ಮಾಡಿ ಮೇಲಧಿಕಾರಿಗಳ ಆದೇಶವನ್ನೇ ರದ್ದು ಮಾಡುವ ಮೂಲಕ ದರ್ಪ ಮೆರೆಯುತ್ತಿದ್ದಾರೆ.

ಹೌದು! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಇಂಡಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ಸಹಾಯಕ ಕುಶಲಕರ್ಮಿ ಎಸ್.ಕೆ.ಕಲಬಾ ಅವರು ವಿಜಯಪುರ ವಿಭಾಗದ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಕೆ.ವೆಂಕಟೇಶ ಅವರಲ್ಲಿ ನಾನು ನಿವೃತ್ತಿ ಅಂಚಿನಲ್ಲಿದ್ದು ನನಗೆ 49 ದಿನಗಳ ವರೆಗೆ ರಜೆ ಮಂಜೂರು ಮಾಡಿ ಎಂದು ವಿನಂತಿಸಿಕೊಂಡಿದ್ದರು.
ಅದಕ್ಕೆ ವಿಭಾಗೀಯ ಯಾಂತ್ರಿಕ ಅಭಿಯಂತರ ಕೆ.ವೆಂಕಟೇಶ ಅವರು ಮಾನವೀಯತೆ ದೃಷ್ಟಿಯಿಂದ ಹಾಗೂ ಸುತ್ತೋಲೆ ಗಳನ್ವಯ ರಜೆ ಮಂಜೂರು ಮಾಡಿದ್ದಾರೆ. ಆದರೆ, ಈ ಮಂಜೂರು ಮಾಡಿರುವ ರಜೆಯನ್ನು ಪ್ರಭಾರ ಘಟಕ ವ್ಯವಸ್ಥಾಪಕರಾದ ವಿಠ್ಠಲ್ ನಡುವಿನಮನಿ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ವಿಭಾಗೀಯ ಯಾಂತ್ರಿಕ ಅಭಿಯಂತರರು ಮಂಜೂರು ಮಾಡಿರುವ ರಜೆಯನ್ನು ರದ್ದು ಮಾಡಿ ನಿವೃತ್ತಿ ಅಂಚಿನಲ್ಲಿರುವ ಎಸ್.ಕೆ.ಕಲಬಾ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಈ ರಜೆಯನ್ನು ರದ್ದು ಮಾಡುವ ಮೂಲಕ ಪ್ರಭಾರ ಡಿಎಂ ವಿಠ್ಠಲ್ ನಡುವಿನಮನಿ ಮೇಲಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವುದಲ್ಲದೆ ನಿವೃತ್ತಿ ಅಂಚಿನಲ್ಲಿರುವ ಸಂಸ್ಥೆಯ ಸಿಬ್ಬಂದಿಗೆ ಅನ್ಯಾಯ ಕೂಡಾ ಮಾಡಿದ್ದಾರೆ ಎಂದು ಕೆ.ಎಸ್.ಆರ್.ಟಿ.ಸಿ.ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ್ ಕೊಣ್ಣೂರ್ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ವಿಜಯಪುರ ವಿಭಾಗದ ಮುಖಂಡ ಎಂ.ಡಿ.ಯೂನಸ್ ಆರೋಪಿಸಿದ್ದಾರೆ.
ಇದಿಷ್ಟೇ ಅಲ್ಲದೆ ನಾವು ಏ.5ರಿಂದ ಈದಿನದವರೆಗೆ 30 ರಿಂದ 35 ಸಲ ದೂರವಾಣಿ ಕರೆ ಮಾಡಿದರು ಸ್ವೀಕರಿಸಿಲ್ಲ. ಈ ವಿಠ್ಠಲ ನಡುವಿನಮನಿ ಅವರು ಇನ್ನೂ ಪ್ರಭಾರ ಘಟಕ ವ್ಯವಸ್ಥಾಪಕರಾಗಿದ್ದು ಇವರು ಒಬ್ಬ ನೌಕರರ ಮುಖಂಡನ ಕರೆ ಸ್ವೀಕಾರ ಮಾಡುವುದಿಲ್ಲ ಅಂದ್ರೆ ಇನ್ನು ನೌಕರರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ಇನ್ನು ನೌಕರರ ಮುಖಂಡರ ಕರೆಯನ್ನೇ ಸ್ವೀಕಾರ ಮಾಡುವುದಿಲ್ಲ ಎಂದರೆ ಮುಂದೆ ಇವರು ಪದೊನ್ನತಿ ಹೊಂದಿ ಕಾಯಂ ಘಟಕ ವ್ಯವಸ್ಥಾಪಕರಾದರೆ ನೌಕರರು ಹಾಗೂ ನೌಕರರ ಮುಖಂಡರನ್ನು ಯಾವರೀತಿ ನಡೆಸಿಕೊಳ್ಳಬಹುದು ಎಂಬ ಬಗ್ಗೆ ನೆನೆಸಿಕೊಂಡರೆ ಆತಂಕವಾಗುತ್ತದೆ.
ಹೀಗಾಗಿ ಈ ನಡುವಿನಮನಿ ಹಾಗೂ ಇವರ ಜತೆಗೆ ವಿಜಯಪುರ ವಿಭಾಗದ ಇತರೇ ಅಧಿಕಾರಿಗಳು ಸಹ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಈ ಮೂಲಕ ಅಂದರೆ ಕರೆಗಳನ್ನು ಸ್ವೀಕರಿಸದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ.
ಮೇಲಧಿಕಾರಿಗಳು ಮಂಜೂರು ಮಾಡಿರುವ ರಜೆಯನ್ನು ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ವಿಠ್ಠಲ ನಡುವಿನಮನಿ ಅವರು ಆದೇಶ ರದ್ದು ಮಾಡಿದ್ದು ನೋಡಿದರೆ ಇಲ್ಲಿ ಭ್ರಷ್ಟಚಾರದ ವಾಸನೆ ಬರುತ್ತಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಹಾಗೂ ಕೆಕೆಆರ್ಟಿಸಿ ಎಂಡಿ ಡಾ.ಬಿ.ಸುಶೀಲ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದು, ಈ ನಿವೃತ್ತಿ ಅಂಚಿನಲ್ಲಿರುವ ಸಿಬ್ಬಂದಿಯರಜೆಯನ್ನು ಮಂಜೂರು ಮಾಡಲು ಹಾಗೂ ಮಂಜೂರು ಮಾಡಿದ ರಜೆಯನ್ನು ರದ್ದು ಮಾಡಿದ ಇಂಡಿ ಘಟಕ ವ್ಯವಸ್ಥಾಪಕ ಅವರ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು. ಜತೆಗೆ ವಿಜಯಪುರ ವಿಭಾಗದ ಇನ್ನುಳಿದ ಕೆಲ ಅಧಿಕಾರಿಗಳು ಕೂಡ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಅಂಥವರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿ ಕರೆ ಸ್ವೀಕರಿಸುವಂತೆ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮ ಘಟಕದಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ನಾವು 49 ದಿನಗಳವರೆಗೆ ರಜೆ ಮಂಜೂರು ಮಾಡಲು ಆಗುವುದಿಲ್ಲ ನೀವು 30 ದಿನಗಳವರೆಗೆ ರಜೆ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ.
I ವಿಠ್ಠಲ್ ನಡುವಿನಮನಿ, ಡಿಎಂ ಇಂಡಿ ಘಟಕ, ವಿಜಯಪುರ ವಿಭಾಗ, ಕೆಕೆಆರ್ಟಿಸಿ
Related









