ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಚಲಿಸುತ್ತಿದ್ದಾಗಲೇ ಸ್ಟೇರಿಂಗ್ ಕಿತ್ತು ಬಂದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಿಣಾಮ ಬಸ್ ರಸ್ತೆ ಬದಿಯ ಕಂದಕಕ್ಕೆ ಹೋಗಿ ನಿಂತಿದೆ.
ಚಲಿಸುತ್ತಿದ್ದಾಗಲೇಏ ಏಕಾಏಕಿ ಬಸ್ ಸ್ಟೇರಿಂಗ್ ಚಾಲಕನ ಕೈಗೆ ಬಂದಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಭಾರೀ ದೊಡ್ಡ ದುರಂತವನ್ನು ತಪ್ಪಿದ್ದಾನೆ. ಹೀಗಾಗಿ 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತ್ತೀಚೆಗೆ ಕೆಕೆಆರ್‌ಟಿಸಿಯ ಬಸ್‌ಗಳಲ್ಲಿ ಭಾರಿ ಸಮಸ್ಯೆ ಆಗುತ್ತಿದ್ದು, ಬಿಡಿ ಭಾಗಗಳು ಕಿತ್ತು ಬರುತ್ತಿವೆ. ವಾರದಿಂದ ಈಚೆಗೆ 5 ಬಸ್‌ಗಳ ಟಯರ್‌ಗಳು ಬರ್ಸ್ಟ್‌ಆಗಿ 5-10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ಸವೆದು ಹೋಗಿರುವ ಟಯರ್‌ಗಳನ್ನು ಬಸ್‌ಗಳಿಗೆ ಅಳವಡಿಸಿರುವುದೇ ಕಾರಣ ಎಂದು ಚಾಲನಾ ಸಿಬ್ಬಂದಿ ಆರೋಪ ಮಾಡಿದ್ದಾರೆ.
ಮತ್ತೆ ಇದೇ ನಿಗಮದ ಬಸ್‌ನ ಸ್ಟೇರಿಂಗ್ ಕೈಗೆ ಬಂದಿದ್ದು, ಚಾಲಕ ಸ್ವಲ್ಪ ಸಮಯ ಪ್ರಜ್ಞೆ ಮೆರೆಯದಿದ್ದರೂ ಎಂಥ ಅನಾಹುತ ಆಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಈರೀತಿಯ ಅವಘಡಗಳಿಗೆ ಡಿಪೋ ಮಟ್ಟದಲ್ಲಿ ಇರುವ ಅಧಿಕಾರಿಗಳ ಬೇಜವಾಬ್ದಾರಿತನವೆ ಪ್ರಮುಖ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.
ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ತಲುಪಿಸಬೇಕಾದ ಸರ್ಕಾರಿ ಬಸ್‌ಗಳೇ ಈರೀತಿ ಆದರೆ, ಜನರು ಮತ್ತ್ಯಾವ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕು ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.