ತುಮಕೂರು: ಚನ್ನೈನಲ್ಲಿ KKRTC ಕಂಡಕ್ಟರ್ ಹೃದಯಾಘಾತದಿಂದ ನಿಧನರಾಗಿದ್ದು ಅವರ ಬಾಡಿಯನ್ನು ಬಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಹಿಂದೆ ಬೊಲೇರೋ ವಾಹನದಲ್ಲಿ ಹೋಗುತ್ತಿದ್ದ ಅಧಿಕಾರಿಗಳ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ತುಮಕೂರು ಸಮೀಪ ಸಂಭವಿಸಿದೆ.
ತುಮಕೂರು ಟೋಲ್ ಗೇಟ್ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಅಪಘಾತದಲ್ಲಿ ಬೊಲೇರೋ ಚಾಲನೆ ಮಾಡುತ್ತಿದ್ದ ಬಳ್ಳಾರಿ ಒಂದನೇ ಘಟಕದ ಚಾಲಕ ಜಗನ್ನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಳಿದಂತೆ ಸಂಸ್ಥೆಯ ಸಂಡೂರು ಘಟಕದ ಘಟಕ ವ್ಯವಸ್ಥಾಪಕ ಚಂದ್ರ, ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ನಾಗೇಂದ್ರ, ಸಹಾಯಕ ಸಂಚಾರ ನಿರೀಕ್ಷಕ ಆರ್.ಸದಾನಂದ, ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕ ಉಮಾಪತಿ, ಚಾಲಕ ಕಂ ನಿರ್ವಾಹಕ (ಐಡಿ-4573) ಚಂದ್ರಶೇಖರಯ್ಯ ಅವರಿಗೆ ಗಾಯಗಳಾಗಿದ್ದು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ನಾಗೇಂದ್ರ ಅವರ ಬಲಗಾಲು ಮುರಿದಿದ್ದು, ತಲೆಗೆ ಪೆಟ್ಟಾಗಿರುವುದರಿಂದ ಅವರನ್ನು ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತಂದು ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕರ್ತವ್ಯ ನಿರತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ಒಂದನೇ ಘಟಕದ ನಿರ್ವಾಹಕ ದಾವಲ್ ಸಾಬ ಚನ್ನೈನಲ್ಲಿ ಬಸ್ ಹಾಲ್ಟ್ ಆಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರು ಮೂಲಕ ಗಜೇಂದ್ರಗಡಕ್ಕೆ ಬಸ್‌ನಲ್ಲಿ ತೆಗೆದುಕೊಂಡು ಹೋಗುವಾಗ ಸಂಸ್ಥೆಯ ಅಧಿಕಾರಿಗಳು ಹಿಂದೆ ಬೊಲೇರೋ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ವಾಹನ ಪಲ್ಟಿ ಆಗಿ ಈ ಅವಘಡ ಸಂಭವಿಸಿದೆ.
ಬಳ್ಳಾರಿ ಒಂದನೇ ಘಟಕದ ನಿರ್ವಾಹಕ: ಚನ್ನೈನಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ನಿಧನರಾದ ನಿರ್ವಾಹಕ ದಾವಲ್ ಸಾಬ ಅವರು ಬಳ್ಳಾರಿ ಒಂದನೇ ಘಟಕದ ನೌಕರರಾಗಿದ್ದರು. ಅವರು ಮೂಲತಃ ಗದಗ ಜಿಲ್ಲೆಯ ಗಜೆಂದ್ರಗಡದವರಾಗಿದ್ದು, ಚನ್ನೈನಿಂದ ಗಜೇಂದ್ರಗಡಕ್ಕೆ ಪಾರ್ಥಿವ ಶರೀರವನ್ನು ಸಾಗಿಸುತ್ತಿದ್ದಾಗ ಹಿಂದೆ ಬೊಲೇರೋ ವಾಹನದಲ್ಲಿ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಅವಘಡಕ್ಕೆ ಏನು ಕಾರಣ ಎಂದು ತಿಳಿದು ಬಂದಿಲ್ಲ.