ವಿಜಯಪುರ: ಕೆಕೆಆರ್‌ಟಿಸಿ ನೌಕರರ ವಿರೋಧಿ ಅಧಿಕಾರಿ ನಾರಾಯಣಪ್ಪ ಕುರಬರ ಅವರಿಗೆ ವಿಜಯಪುರ ಕೆಕೆಆರ್‌ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರಲ್ಲಿ ನೌಕರರು ಮನವಿ ಮಾಡಿದ್ದಾರೆ.
ಕಳೆದ ಮೇ 22ರಂದ ಈ ಬಗ್ಗೆ ಮನವಿ ಸಲ್ಲಿಸಿರುವ ವಿಜಯಪುರ ವಿಭಾಗದ ಕೂಟದ ಪದಾಧಿಕಾರಿಗಳು, ನಾರಾಯಣಪ್ಪ ಕುರಬರ ಅವರು 2020 ರಿಂದ 21ರವರೆಗೆ ಕೆಕೆಆರ್‌ಟಿಸಿ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಈ ವೇಳೆ ಹಲವಾರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮನವಿ ಪತ್ರದಲ್ಲಿ ದೂರಿದ್ದಾರೆ.
2020-21ನೇ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ನಾವು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಿಕಟಪೂರ್ವ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರಿಗೆ ಸಚಿವರು, ಅಂದು ಇದ್ದ ಎಸಿಬಿ, ಲೋಕಾಯುಕ್ತ ಮತ್ತು ನಿಗಮದ ವ್ಯವಸ್ಥಾಪಕರ ಗಮನಕ್ಕೂ ತಂದಿದ್ದೇವೆ.
ಆ ವೇಳೆ ಸರ್ಕಾರದ ಪತ್ರದಂತೆ 3 ಉನ್ನತ ಮಟ್ಟದ ಅಧಿಕಾರಿಗಳ ಒಂದು ತಂಡವನ್ನು ರಚಿಸಿ ತುರ್ತಾಗಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ, 2 ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ತನಿಖಾಧಿಕಾರಿಗಳು ತಮ್ಮ ವರದಿ ಸಲ್ಲಿಸದೇ ಇರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ವಿವರಿಸಿದ್ದಾರೆ.
ಇನ್ನು ಇದೇ ದೂರು ನಿಗಮದ ಒಬ್ಬ ನೌಕರನ ವಿರುದ್ಧ ಇದ್ದಿದ್ದರೆ ಅವರ ವಿರುದ್ಧ ತನಿಖೆ ಮಾಡಿ ಈಗಾಗಲೆ ಸೇವೆಯಿಂದ ವಜಾ ಮಾಡುತ್ತಿದ್ದರು. ಆದರೆ ಈ ದೂರು ಒಬ್ಬ ಅಧಿಕಾರಿಯ ಮೇಲೆ ಇರುವುದರಿಂದ ಎಲ್ಲ ಅಧಿಕಾರಿಗಳು ಸೇರಿ ಅವರನ್ನು ಬಚಾವ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.
ನಾರಾಯಣಪ್ಪ ಕುರಬರ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬರುವ ಉದ್ದೇಶ ಹೊಂದಿದ್ದಾರೆ. ಇವರು ಈ ವಿಭಾಗಕ್ಕೆ ಬಂದರೆ ತಮ್ಮ ವಿರುದ್ಧ ದೂರು ಸಲ್ಲಿಸಿ ಭ್ರಷ್ಟಾಚಾರವನ್ನು ಬಯಲಿಗೆಳೆದ ನೌಕರರಿಗೆ ಕಿರುಕುಳ ನೀಡಿ ಅವರನ್ನು ಯಾವುದೋ ಒಂದು ಪ್ರಕರಣದಲ್ಲಿ ಸಿಲುಕಿಸಿ ಸೇವೆಯಿಂದ ವಜಾ ಮಾಡಿಸುವುದು ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ವಿಜಯಪುರ ವಿಭಾಗದಲ್ಲಿ ಸಾಕಷ್ಟು ಅಂದರೆ ಕೋಟಿಗಟ್ಟಲೆ ಭ್ರಷ್ಟಾಚಾರ ಜತೆಗೆ ಸ್ವಜನಪಕ್ಷಪಾತ ಮಾಡಿರುವ, ಅಲ್ಲದೆ ಕಾರ್ಮಿಕರಿಗೆ ಕಿರುಕುಳ, ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡಿರುವ ಇವರನ್ನು ಈ ವಿಭಾಗಕ್ಕೆ ನಿಯೋಜನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಇವರು ಎಸಗಿರುವ ಭ್ರಷ್ಟಾಚಾರದ ತನಿಖೆ ವೇಳೆ ಎಲ್ಲ ದೂರುದಾರರು ಸಹ ಇವರ ವಿರುದ್ಧ ಸಾಕ್ಷಿ ಪುರಾವೆ ಸಹಿತ ಲಿಖಿತ ರೂಪದಲ್ಲಿ ಹೇಳಿಕೆ ನೀಡಿದ್ದಾರೆ. ಈ ಎಲ್ಲದರ ನಡುವೆಯೂ ಈಗ ಶತಾಯ ತಗಾಯ ಪ್ರಯತ್ನ ಮಾಡಿ ವಿಜಯಪುರ ವಿಭಾಗಕ್ಕೆ ಮತ್ತೆ ವಿಭಾಗೀಯ ನಿಯಂತ್ರನಾಧಿಕಾರಿಯಾಗಿ ಬರುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.