ಪಿರಿಯಾಪಟ್ಟಣ: ಮಣ್ಣುಪರೀಕ್ಷೆ, ಬೀಜೋಪಚಾರ, ರಸಗೊಬ್ಬರದ ಮಹತ್ವವನ್ನು ತಿಳಿಯಲು ಕೃಷಿ ಸಂಜೀವಿನಿ ಯೋಜನೆ ವರದಾನವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಕಿರನಲ್ಲಿ, ಬಸಲಾಪುರ ಹಾಗೂ ತಾತನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕೃಷಿ ಸಂಜೀವಿನಿ ಯೋಜನೆ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
ಪ್ರತಿ ಹೋಬಳಿಯಲ್ಲಿ ಲಭ್ಯವಿರುವ ಕೃಷಿ ಸಂಜೀವಿನಿ ಮೊಬೈಲ್ ಲ್ಯಾಬ್ ವಾಹನವನ್ನು ಬಳಸಿಕೊಂಡು ರೈತರು ಕೃಷಿಗೆ ಸಂಬಂಧಿಸಿದ ಕೆಲಸಕ್ಕೆ ವಿವಿಧ ಇಲಾಖೆಗೆ ಅಲೆಯುವ ತೊಂದರೆ ತಪ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದು, ತಾಲೂಕಿನಾದ್ಯಂತ ಕೃಷಿ ಸಂಜೀವಿನ ವಾಹನವು ಸಂಚರಿಸಿ ರೈತರಿಗೆ ಅಗತ್ಯ ಮಾಹಿತಿ ನೀಡಲು ಈ ರಥವನ್ನು ಕಿರನಲ್ಲಿ, ಬಸಲಾಪುರ ಹಾಗೂ ತಾತನಹಳ್ಳಿ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.
ನಾಳೆಯಿಂದ ತಾಲೂಕಿನಾದ್ಯಂತ ರೈತರ ಮನೆ ಮತ್ತು ಜಮೀನಿಗೆ ತೆರಳಿ ಜಮೀನಿನ ಮಣ್ಣು, ನೀರು ಪರೀಕ್ಷೆಗೆ ಪ್ರಯೋಗಾಲಯ, ಬೀಜ, ಗೊಬ್ಬರಗಳ ಬಗ್ಗೆ ಮಾಹಿತಿ ನೀಡಲಿದ್ದು, ರೈತರು ಕುಳಿತಲ್ಲಿಯೇ ಸಹಾಯವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಅಲ್ಲದೆ ನೇರವಾಗಿ ತಮ್ಮ ಜಮೀನಿಗೆ ವಾಹನ ತರಿಸಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮಳೆ, ತೇವಾಂಶ, ಮಣ್ಣು, ನೀರು, ಕೀಟಬಾಧೆ, ರೋಗ ಸೇರಿದಂತೆ ಇತರೆ ತಾಂತ್ರಿಕ ನೆರವನ್ನು ಪಡೆಯಬಹುದು ಎಂದರು.
ಕೃಷಿ ವಿಜ್ಞಾನಿ ಡಾ.ತಿಮಕಾಪುರ ವಸಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಕೃಷಿ ಸಂಜೀವಿನಿ ಯೋಜನೆ ಮೂಲಕ ರೈತರಿಗೆ ಅಗತ್ಯವಾದ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲಾಗಿದೆ.
ರೈತರು ಈ ವಾಹನದ ಪ್ರಯೋಜನ ಪಡೆಯಲು ಉಚಿತ ಸಹಾಯವಾಣಿಗೆ (155313) ಕರೆ ಮಾಡಬಹುದು. ಈ ಮೂಲಕ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಮಾಹಿತಿ ನೀಡಲಿದ್ದಾರೆ. ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಎಂದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಿಂದ ಬಂದಿದ್ದ ವಿದ್ಯಾರ್ಥಿಗಳು ಹಾಗೂ ರೈತರಿಗೆ ರಾಗಿ ಬೆಳೆಯಲ್ಲಿ ಬೀಜೋಪಚಾರ, ರಾಗಿ ಸಾಲು ಬಿತ್ತನೆ, ರಾಗಿ ನಾಟಿ ಪದ್ಧತಿ, ಶುಂಠಿ ಮತ್ತು ತಂಬಾಕಿನಲ್ಲಿ ಹಾಗೂ ಅಡಿಕೆ, ತೆಂಗು ರೋಗ ಕೀಟ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಡಿಎ ಎಸ್.ಎಂ.ಎಸ್ ಮೋಹನ್‌ಕುಮಾರ್, ನಾಗೇನಹಳ್ಳಿ ಸಹಾಯಕ ಪ್ರಾದ್ಯಾಪಕ ರಾಹುಲ್, ಆತ್ಮಯೋಜನೆ ಉಪ ನಿರ್ದೇಶಕಿ ಡಾ.ಕುಮುದ, ಕೃಷಿ ಅಧಿಕಾರಿ ಮಹೇಶ್, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ರೈತರು ಹಾಜರಿದ್ದರು.