ಕೃಷ್ಣರಾಜಪೇಟೆ: ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗಳಿಬ್ಬರಿಗೆ ಮಡಿಲಕ್ಕಿ ತುಂಬಿ ಸೀಮಂತ ಮಾಡುವ ಮೂಲಕ ಪೊಲೀಸರು ವಿಶೇಷ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರು ಗರ್ಭಿಣಿ ಮುತ್ತೈದೆಯರಾದ ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿಯನ್ನು ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನ ಕಾಯಿ ಅರಿಶಿಣ-ಕುಂಕುಮ, ಸೀರೆ ಹಾಗೂ ಬಳೆಗಳನ್ನು ನೀಡಿ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು.
ಒಂದು ಕುಟುಂಬದಲ್ಲಿ ಹಿರಿಯರೆಲ್ಲರೂ ಒಗ್ಗೂಡಿ ಮಾಡುವ ಸೀಮಂತ ಕಾರ್ಯಕ್ರಮವನ್ನು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಎಲ್ಲ ಆರಕ್ಷಕ ಸಿಬ್ಬಂದಿ ಸಮಕ್ಷಮದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಪೇದೆಗಳಾದ ಶಾರದಾ ಮತ್ತು ಅಸ್ಮಾಬಾನು ಅವರಿಗೆ ಅವರಿಗೆ ಮಾಡಿ ಶುಭ ಹಾರೈಸಿದರು.
ಆರಕ್ಷಕ ಉಪನಿರೀಕ್ಷಕ ಸುನಿಲ್ ಮಾತನಾಡಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತೆ ಇಂದು ನನ್ನ ಸಹೋದರಿಯರ ಸಮಾನವಾಗಿರುವ ಅಸ್ಮಾಬಾನು ಹಾಗೂ ಶಾರದಾ ಅವರಿಗೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳೆಲ್ಲರೂ ಒಗ್ಗೂಡಿ ಅರ್ಥಪೂರ್ಣವಾಗಿ ಸೀಮಂತ ಕಾರ್ಯವನ್ನು ನಡೆಸಿಕೊಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದೇವೆ ಎಂದು ಖುಷಿಪಟ್ಟರು.
ಪೊಲೀಸರೂ ಕೂಡ ಮನುಷ್ಯರೇ, ಸದಾ ಒತ್ತಡಗಳ ಮಧ್ಯದಲ್ಲಿಯೇ ಕೆಲಸ ಮಾಡುತ್ತಿರುವ ನಾವು ಇಂದು ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುವ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಸಂಬಂಧಗಳ ಮಹತ್ವವನ್ನು ಸಾರಿದ್ದೇವೆ ಎಂದು ಹೇಳಿದರು.
ಸಹಾಯಕ ಆರಕ್ಷಕ ಉಪನಿರೀಕ್ಷಕ ಚಂದ್ರಶೇಖರ್ ಸೇರಿದಂತೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.