ಬೆಂಗಳೂರು: ರಾಜ್ಯದಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಕೆರೆ, ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಈ ಬಾರಿ ನೀರಿನ ಅಭಾವ ಕಾಡಲಿದೆ. ಕೆಆರ್‌ಎಸ್ ಭರ್ತಿಯಾಗಲ್ಲ ಎಂದು ರೈತರು ಆತಂಕ ಪಡುತ್ತಿದ್ದರು. ಆದರೆ, ಕಳೆದ ಮೂರುದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರ ಆತಂಕ ಸ್ವಲ್ಪಮಟ್ಟಿಗೆ ಕಡಿಮೆ ಆಗಿದೆ ಎಂದೇ ಹೇಳಬಹುದು.
ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಗಿರುವುದರಿಂದ ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ ಇಂದು ಎಷ್ಟಿದೆ? ಒಳ ಹರಿವು ಹೇಗಿದೆ? ಹೊರ ಹರಿವು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್‌ಎಸ್ ಡ್ಯಾಂ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆ. KRS ಡ್ಯಾಂಗೆ ಈ ವರ್ಷದಲ್ಲೆ ಮೊದಲ ಬಾರಿ ಒಳ ಹರಿವಿನ ಪ್ರಮಾಣ ಭಾರಿ ಏರಿಕೆಯಾಗಿದೆ. ಕಳೆದ 12 ಗಂಟೆಯಲ್ಲಿ ಕೆಆರ್‌ಎಸ್ ಡ್ಯಾಂ 3 ಅಡಿ ಭರ್ತಿಯಾಗಿದೆ. ಕಳೆದ 12 ಗಂಟೆ ಹಿಂದೆ 92.60ರಷ್ಟು ಡ್ಯಾಂ ಭರ್ತಿಯಾಗಿತ್ತು. ಆದರೆ ಇಂದು 95 ಅಡಿಗೆ ಏರಿಕೆಯಾಗಿದೆ.
ಡ್ಯಾಂನಲ್ಲಿ 19.139 ಟಿಎಂಸಿ ನೀರು ಶೇಖರಣೆ- ಗರಿಷ್ಠ ಮಟ್ಟ – 124.80 ಅಡಿಗಳು. ಇಂದಿನ ಮಟ್ಟ – 95.00 ಅಡಿಗಳು. ಗರಿಷ್ಠ ಸಾಂದ್ರತೆ – 49.452 ಟಿಎಂಸಿ. ಇಂದಿನ ಸಾಂದ್ರತೆ – 19.139 ಟಿಎಂಸಿ. ಒಳ ಹರಿವು – 29,552 ಕ್ಯೂಸೆಕ್. ಹೊರ ಹರಿವು – 5297 ಕ್ಯೂಸೆಕ್
ಕಬಿನಿ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯ ಭರ್ತಿಗೆ ಆರೇ ಅಡಿ ಬಾಕಿ ಇದೆ. ಕೇರಳದ ವೈನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.
ಕಬಿನಿ ಗರಿಷ್ಠ ಮಟ್ಟ: 2284 ಅಡಿ. ಇಂದಿನ ಮಟ್ಟ: 2278.31 ಅಡಿಗಳು. ಗರಿಷ್ಠ ಸಂಗ್ರಹಣಾ ಸಾಮರ್ಥ್ಯ: 19.52 ಟಿಎಂಸಿ. ಇಂದಿನ ಸಂಗ್ರಹ: 16.09. ಒಳಹರಿವು: 20,749 ಕ್ಯುಸೆಕ್. ಹೊರ ಹರಿವು: 3,333 ಕ್ಯುಸೆಕ್
ಇನ್ನು ಕಬಿನಿ ಭರ್ತಿಯಾದರೆ ರಾಜ್ಯದಲ್ಲಿ ಮೊದಲು ಭರ್ತಿ ಆದ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಮತ್ತೊಂದೆಡೆ ನೀರಿಲ್ಲದೆ ಈ ಬಾರಿ ಕುಸಿತ ಕಂಡಿದ್ದ ಜಲಾಶಯ ಇದಾಗಿದ್ದು, ಕೇವಲ 50 ಅಡಿಗೆ ಕುಸಿದಿತ್ತು. ಕಳೆದ ವರ್ಷ ಇದೇ ದಿನಕ್ಕೆ ಬಾಗಿನ ಅರ್ಪಣೆ ಮಾಡಲಾಗಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಬಾಗಿನ ಅರ್ಪಿಸಿದ್ದರು.
ಅಂದಹಾಗೆಯೇ ಮಳೆ ಇಲ್ಲದೆ ಈ ಬಾರಿ ಜಲಾಶಯ ಭರ್ತಿ ಆಗೋದು ಅನುಮಾನ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಮಳೆ ಕೊರತೆಯಿಂದ ರೈತರು, ಜನ ಜಾನುವಾರು ಕಂಗಾಲಾಗಿದ್ದರು. ಆದರೀಗ ನಿರಂತರ ಮಳೆಯಿಂದಾಗಿ ಕಬಿನಿ ಭರ್ತಿಗೆ ಆರೇ ಅಡಿ ಬಾಕಿ ಇದೆ.
ಹೇಮಾವತಿ ಜಲಾಶಯ: ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು. ಜಲಾಶಯದ ಇಂದಿನ ಮಟ್ಟ 2903.05 ಅಡಿಗಳು. ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ. ಇಂದಿನ ನೀರಿನ ಸಂಗ್ರಹ ಪ್ರಮಾಣ 21.729 ಟಿಎಂಸಿ. ಒಳಹರಿವು 23142 ಕ್ಯೂಸೆಕ್. ಹೊರಹರಿವು 200 ಕ್ಯೂಸೆಕ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ: ಗರಿಷ್ಠ ಸಂಗ್ರಹ ಸಾಮರ್ಥ್ಯ:123.715ಟಿಎಂಸಿ
ಇಂದಿನ ಸಂಗ್ರಹ :62.534ಟಿಎಂಸಿ. ಒಳಹರಿವು : 1,14,445ಕ್ಯೂಸೆಕ್. ಹೊರ ಹರಿವು:- 6761ಕ್ಯೂಸೆಕ್
ಭದ್ರಾ ಜಲಾಶಯ: ಉತ್ತಮ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಒಂದೇ ದಿನದಲ್ಲಿ 4.5 ಅಡಿ ನೀರು ಹೆಚ್ಚಳಕಂಡಿದೆ.
186 ಅಡಿಯ ಡ್ಯಾಂ ನಲ್ಲಿ ಪ್ರಸ್ತುತ 149.5 ಅಡಿ ನೀರು ಸಂಗ್ರಹವಾಗಿದೆ. ಒಂದೇ ದಿನಕ್ಕೆ 145 ಅಡಿಯಿಂದ 149.5 ಅಡಿಗೆ ಹೆಚ್ಚಿದ ನೀರಿನ ಸಂಗ್ರಹವಾಗಿದೆ.
39,348 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 170 ಕ್ಯೂಸೆಕ್ ನೀರು ಹೊರಕ್ಕೆ ಹೋಗುತ್ತಿದೆ. ಭದ್ರಾ ಡ್ಯಾಂ ಭರ್ತಿಗೆ ಬೇಕು ಇನ್ನೂ 30 ಅಡಿ ನೀರು ಬೇಕು
ಕೃಷ್ಣಾ ನದಿ: ಮಹಾರಾಷ್ಟ್ರದಲ್ಲಿ ಮುಂದುವರೆದ ಮಹಾ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಕಲ್ಲೋಳ ಬ್ಯಾರೇಜ್ ನಲ್ಲಿ ಕೃಷ್ಣಾಗೆ 101742 ಕ್ಯೂಸೇಕ್ ನಷ್ಟು ಒಳಹರಿವು ಹೆಚ್ಚಾಗಿದೆ.
ದೂದ್ಗಂಗಾ ನದಿಯ ಒಳಹರಿವಿನ ಪ್ರಮಾಣದಲ್ಲೂ ಸಹ ಗಣನೀಯ ಏರಿಕೆಕಂಡಿದ್ದು, 24992 ಕ್ಯೂಸೇಕ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಬಾಗಲಕೋಟೆಯ ಹಿಪ್ಪರಗಿ ಜಲಾಶಯದಿಂದ 95300 ಕ್ಯೂಸೇಕ್ ನೀರು ಹೊರಕ್ಕೆ ಹೋಗುತ್ತಿದೆ.