ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನಿತ್ಯ ಒಂದು ಸಾವಿರ ರೂ.ಗಳಿಂದ 2 ಸಾವಿರ ರೂ.ಗಳವರೆಗೆ ಜೇಬಿಗಿಳಿಸಿಕೊಂಡು ಹೋಗುವ ಕೆಲ ಭ್ರಷ್ಟ ನೌಕರರಿಗೆ ಕೆಲ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ವಿಜಯಪಥಕ್ಕೆ ಲಭ್ಯವಾಗಿದೆ.
ಹೌದು ಸ್ನೇಹಿತರೆ ನೋಡಿ ರಾಜ್ಯದ ಸಾರಿಗೆ ನಿಗಮಗಳು ಆರ್ಥಿಕವಾಗಿ ಲಾಸ್ನಲ್ಲಿವೆ ಎಂದು ಹೇಳುವ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ಈ ಲಾಸ್ಗೆ ಕಾರಣ ಏನೆಂದು ಕಂಡುಕೊಳ್ಳಲಾರದಷ್ಟು ಮೂರ್ಖರಂತು ಅಲ್ಲ ಎಂದು ನಿಮಗೆಲ್ಲರಿಗೂ ಗೊತ್ತಿದೆ. ಆದರೂ, ಈ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುವ ಮೂಲಕ ಸಾರಿಗೆ ಸಂಸ್ಥೆಗಳನ್ನು ಧೂಳಿಪಟಮಾಡಲು ಸಜ್ಜಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ನಿಮಗೆ ಗೊತ್ತಿರದ ಆದರೆ, ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು ಮತ್ತು ನೌಕರರಿಗೆ ಗೊತ್ತಿರುವ ವಿಷಯವನ್ನು ನಿಮಗೆ ತಿಳಿಸಲೇ ಬೇಕಿದೆ. ಸಾರಿಗೆಯ ಒಂದೊಂದು ನಿಗಮಗಳಲ್ಲೂ ನಿತ್ಯ ನೂರಾರು ಲಕ್ಷ ರೂಪಾಯಿ ಸಂಸ್ಥೆಯ ಖಜಾನೆ ಸೇರುವ ಬದಲಿಗೆ ಕೆಲ ಭ್ರಷ್ಟ ನೌಕರರ ಕಿಸೆ ಸೇರುತ್ತಿದೆ.
ಇದನ್ನು ನೀವು ತಕ್ಷಣಕ್ಕೆ ನಂಬಲು ಸಾಧ್ಯವಿಲ್ಲ ಎಂದು ಹೇಳಬಹುದು. ಆದರೆ ಇದು ಸತ್ಯ. ಇದಕ್ಕಾಗಿಯೇ ಕೆಲ ಭ್ರಷ್ಟ ಅಧಿಕಾರಿಗಳು ಕೆಲ ನೌಕರರಿಗೆ ಸಾಥ್ ನೀಡುವ ಮೂಲಕ ಅವರು ತಿಂಗಳಿಗೆ ಇಂತಿಷ್ಟು ಎಂದು ಈ ಭ್ರಷ್ಟ ಅಧಿಕಾರಿಗಳಿಂದ ಮಂತ್ಲಿ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.
ಹೇಗೆ ಸಂಸ್ಥೆಯ ಹಣ ಕೊಳ್ಳೆಹೊಡೆಯುತ್ತಾರೆ: ಸಾರಿಗೆ ನಿಗಮಗಳಲ್ಲಿ ಕೆಲ ಭ್ರಷ್ಟ ನಿರ್ವಾಹಕರೊಂದಿಗೆ ಕೆಲ ಭ್ರಷ್ಟ ಅಧಿಕಾರಿಗಳು ಶಾಮೀಲಾಗುತ್ತಾರೆ. ಅಂದರೆ ಮೊದಲು ಈ ನೌಕರರು ನಮ್ಮ ಭ್ರಷ್ಟಾಚಾರಕ್ಕೆ ಕೈ ಜೋಡಿಸುತ್ತಾರೆಯೇ ಎಂದು ನೋಡುತ್ತಾರೆ. ಅವರು ಕೈ ಜೋಡಿಸುತ್ತಾರೆ ಎಂದು ತಿಳಿದ ಮೇಲೆ ಅವರಿಗೆ ಒಂದು ಕೋಡ್ವರ್ಡ್ ನೀಡುತ್ತಾರೆ.
ಅಂದರೆ, ಗ್ರೀನ್ಕಾರ್ಡ್ ಇದು ಸಾಮಾನ್ಯವಾಗಿ ಕೆಎಸ್ಆರ್ಟಿಸಿ ಚಾಮರಾಜನಗರ, ಮೈಸೂರು ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಭ್ರಷ್ಟ ನೌಕರರಿಗೆ ಅಧಿಕಾರಿಗಳು ಇಟ್ಟಿರುವ ಕೋಡ್ವರ್ಡ್ ಇನ್ನು ಬೆಂಗಳೂರು, ಮಂಗಳೂರು, ಹೀಗೆ ಇತರ ಭಾಗಗಳಲ್ಲೂ ಈ ಗ್ರೀನ್ಕಾರ್ಡ್ ಸೇರಿದಂತೆ ರೆಡ್, ಬ್ಲೂ ಹೀಗೆ ಒಂದೊಂದು ವಿಭಾಗದಲ್ಲಿ ಒಂದೊಂದು ಕೋಡ್ವರ್ಡ್ ಇಟ್ಟುಕೊಂಡಿದ್ದಾರೆ.
ಅದರಂತೆ ಬೆಂಗಳೂರಿಗ ಬಿಎಂಟಿಸಿ ನಿಗಮದಲ್ಲಿ ಬಿಎಂ ಕೋಡ್ವರ್ಡ್ (ಬೋರ್ಡ್ ಮೆಂಬರ್) ಇದೆ ಇದು ಈ ಹಿಂದಿನಿಂದಲೂ ಇದ್ದು, ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಈಗ ಎಲ್ಲಿದ್ದೀರಿ ಎಂಬ ಕೋಡ್ವರ್ಡ್ ಕೂಡ ಇದೆಯಂತೆ. ಇದರ ಜತೆಗೆ ಕೆಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿಯಲ್ಲಿ ಮೆಂಬರ್, ನಿಮ್ಮವನೆ ಹೀಗೆ ಒಂದೊಂದು ಕೋಡ್ವರ್ಡ್ ಇದೆ.
ಇದು ಕೇವಲ ಭ್ರಷ್ಟ ಅಧಿಕಾರಿಗಳು ಮತ್ತು ಕೆಲ ಭ್ರಷ್ಟ ನೌಕರರಿಗಷ್ಟೇ ಅನ್ವಯವಾಗುವುದು. ಅದರಲ್ಲೂ ಮುಖ್ಯವಾಗಿ ಕೆಲ ಭ್ರಷ್ಟ ನಿರ್ವಾಹಕರಿಗೆ ಮಾತ್ರ ಈ ರೀತಿಯ ಕೋಡ್ವರ್ಡ್ಗಳನ್ನು ನೀಡುತ್ತಾರೆ ಅಧಿಕಾರಿಗಳು. ಇನ್ನು ಈ ಭ್ರಷ್ಟ ನಿರ್ವಾಹಕರ ಬಸ್ ಮಾರ್ಗದಲ್ಲಿ ತನಿಖೆಗೆ ಇಂದು ತನಿಖಾಧಿಕಾರಿಗಳು ಬರುತ್ತಾರೆ ಎಂದರೆ, ಹಿಂದಿನ ದಿನವೇ ನಿರ್ವಾಹಕರಿಗೆ ಈ ಭ್ರಷ್ಟ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಹೀಗಾಗಿ ಆ ದಿನ ಭ್ರಷ್ಟ ನೌಕರ ರಜೆ ಹಾಕಿಕೊಳ್ಳುವುದು ಇಲ್ಲ ಬೇರೊಂದು ಮಾರ್ಗದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವುದು. ಇಲ್ಲ ಇದೇ ರೂಟ್ನಲ್ಲಿ ಹೋಗಲೇ ಬೇಕು ಎಂದರೆ, ಭ್ರಷ್ಟ ಅಧಿಕಾರಿಗಳ ಸೂಚನೆ ಮೇರೆಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಾರೆ.
ಪ್ರಾಮಾಣಿಕ ನೌಕರರು ಇಂಥ ಭ್ರಷ್ಟ ಅಧಿಕಾರಿಗಳು ಮತ್ತು ನಿರ್ವಾಹಕರ ಹಣದಾಹಕ್ಕೆ ಬಲಿಯಾಗುತ್ತಾರೆ. ಅಂದರೆ, ಇಲ್ಲಿ ಭ್ರಷ್ಟ ನಿರ್ವಾಹಕರನ್ನು ರಕ್ಷಿಸುವುದಕ್ಕೆ ಕೆಲ ಮೇಲಧಿಕಾರಿಗಳಿಂದ ಸಾಥ್ ಸಿಗುತ್ತಿದೆ. ಹೀಗಾಗಿ ತಿಂಗಳಿಗೆ ಇಷ್ಟು ಕೇಸ್ ಬರೆಯಲೇ ಬೇಕು ಎಂಬ ನಿಯಮವಿರುವುದರಿಂದ ಕೆಲ ಭ್ರಷ್ಟ ತನಿಖಾಧಿಕಾರಿಗಳು ಅಮಾಯಕರನ್ನು ಗುರಿಯಾಗಿಸಿಕೊಂಡು ಅವರಿಗೆ ಮೆಮೋ ಕೊಡುತ್ತಾರೆ. ಅಷ್ಟೇ ಅಲ್ಲದೆ ಅಮಾನತುಕೂಡ ಮಾಡಿಸುತ್ತಾರೆ…. ಮುಂದುವರೆಯುವುದು..