ಕೊಳ್ಳೇಗಾಲ: ಮಗನ ಚಿಕಿತ್ಸೆ ಹಣಹೊಂದಿಸಲು ಸಾಧ್ಯವಾದೆ ತಮ್ಮ ಬಳಿಯಿದ್ದ ಚಿನ್ನಾಭರಣ ಮಾರಲು ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ KSRTC ಬಸ್‌ನಲ್ಲಿ ಬರುತ್ತಿದ್ದ ವೇಳೆ 117 ಗ್ರಾಂ ಚಿನ್ನಾಭರಣಗಳನ್ನು ಖದೀಮರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ತಿ.ನರಸೀಪುರ ತಾಲೂಕಿನ ಕಲಿಯೂರು ಗ್ರಾಮದ ಕೆ.ರಾಜೇಶ ಎಂಬವರು 3.51 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 15 ಸಾವಿರ ರೂ. ನಗದು, ಇತರೆ ದಾಖಲಾತಿಗಳನ್ನು ಇಟ್ಟಿದ್ದ ಬ್ಯಾಗನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ದುಷ್ಕರ್ಮಿಗಳು ಸುಮಾರು 3.51 ಲಕ್ಷ ರೂ. ಮೌಲ್ಯದ 117 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಎಗರಿಸಿದ್ದಾರೆ.
ಕೆ.ರಾಜೇಶ್ ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಗ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗಾಗಿ ತಮ್ಮ ಕುಟುಂಬದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಸಲುವಾಗಿ ಚಿನ್ನ, ಹಣ ಹಾಗೂ ಇತರೆ ದಾಖಲಾತಿಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಬೆಂಗಳೂರಿನ ಬಸ್ ನಿಲ್ದಾಣದಿಂದ ಬಸ್ ಹತ್ತಿ ಸೀಟ್ ಮೇಲಿನ ಲಗೇಜ್ ಇಡುವ ಸ್ಥಳದಲ್ಲಿ ಬ್ಯಾಗ್ ಇಟ್ಟಿದ್ದರು.
ಕೊಳ್ಳೇಗಾಲಕ್ಕೆ ಬಂದ ನಂತರ ಇಳಿಯುವ ವೇಳೆ ಸೀಟ್ ಮೇಲಿನ ಲಗೇಜ್ ಜಾಗದಲ್ಲಿ ನೋಡಿದಾಗ ಚಿನ್ನಾಭರಣ, ನಗದು ಇಟ್ಟಿದ್ದ ಬ್ಯಾಗ್ ಕಳುವಾಗಿರುವ ಗೊತ್ತಾಗಿದೆ.
ಬಸ್ಸಿನಲ್ಲಿ ಎಲ್ಲ ಕಡೆ ಬಸ್ ಚಾಲಕ ಹಾಗೂ ನಿರ್ವಾಹಕರ ಜತೆ ಹುಡುಕಾಡಿದರೂ ಬ್ಯಾಗ್ ಸಿಗಲಿಲ್ಲ. ಯಾರಾದರೂ ಮಾನವೀಯತೆ ದೃಷ್ಟಿಯಿಂದಲಾದರೂ ತಂದುಕೊಡಬಹುದೆಂದು ಕಾದರೂ ಯಾರೂ ಬರಲಿಲ್ಲವಾದ್ದರಿಂದ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಳವಾಗಿರುವ ಚಿನ್ನಾಭರಣ ಹಾಗೂ ನಗದು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.