ಕೊಳ್ಳೇಗಾಲ: ಆಸ್ಪತ್ರೆಗೆ ಹೋಗಿ ಬರುತ್ತಿದ್ದ ಗರ್ಭಿಣಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ಬಳಿ ನಡೆದಿದೆ.
ಅಜ್ಜೀಪುರ ಗ್ರಾಮದ 22 ವರ್ಷದ ನಮಿತಾ ಅತಿವೇಗದಿಂದ ಬರುತ್ತಿದ್ದ ಸಾರಿಗೆ ವಾಹನಕ್ಕೆ ಸಿಲುಕಿ ಮೃತ ಪಟ್ಟವರು.
ನಮಿತಾ ಮೂಲತಃ ಪಿಜಿ ಪಾಳ್ಯ ಗ್ರಾಮದವರಾಗಿದ್ದು ಅಜ್ಜೀಪುರ ಗ್ರಾಮಕ್ಕೆ ಮದುವೆಯಾಗಿದ್ದರು. ಈಕೆ ಎರಡು ತಿಂಗಳ ಗರ್ಭಿಣಿಯಾಗಿದ್ದು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ವೈದ್ಯಕೀಯ ತಪಾಷಣೆಗಾಗಿ ಬುಧವಾರ ಬಂದಿದ್ದು ತಪಾಸಣೆ ಬಳಿಕ ತಮ್ಮ ಗ್ರಾಮಕ್ಕೆ ತೆರಳಲು ಆಸ್ಪತ್ರೆ ಮುಂದಿನ ರಸ್ತೆ ದಾಟುತ್ತಿದ್ದಾಗ ಈ ದಾರುಣ ಘಟನೆ ನಡೆದಿದೆ.
ಈ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಮೃತ ಗರ್ಭಿಣಿಯ ಸಂಬಧಿಕರು ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಬಸ್ ಚಾಲಕರು ಈ ಸ್ಥಳದಲ್ಲಿ ನಿಧಾನವಿಲ್ಲದೆ ಅತೀವೇಗವಾಗಿಯೇ ಬಸ್ ಚಲಾಯಿಸುತ್ತಾರೆ ಎಂದು ಆರೋಪಿಸಿದರು.
ಇನ್ನು ಕಾಮಗೆರೆ ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ನಿರಂತವಾಗಿ ಅಪಘಾತವಾಗುತ್ತಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಇದು ಮೂರನೇ ಘಟನೆಯಾಗಿದೆ. ಅಲ್ಲದೆ ನಿರಂತರ ಅಪಘಾತದುಇಂದ ಹಲವಾರು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂಥ ಅಪಘಾತಗಳು ಆಗುತ್ತಿದ್ದರೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಬ್ಯಾರಿಕೆಡ್ ಅಳವಡಿಸದೆ ಇರುವುದು ಇನ್ನಷ್ಟು ದುರಂತಗಳಿಗೆ ಕಾರಣವಾಗಿ ಎಂದು ಕಿಡಿಕಾರಿದರು.
ನಾಲ್ಕು ತಿಂಗಳ ಹಿಂದೆ ಪೊಲೀಸ್ ಇಲಾಖೆಗೆ ಹಾಗೂ ಕೆಕೆಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಈ ಬಗ್ಗೆ ಮನವಿ ಮಾಡಿದ್ದೆವು. ಆದರೂ ಕೂಡ ಎಚ್ಚೆತ್ತುಕೊಂಡಿಲ್ಲ ಇಂತಹ ಅಪಘಾತಗಳು ಮತ್ತೆ ಸಂಭವಿಸದೆ ಇರಲಿ ಎಂಬ ಉದ್ದೇಶದಿಂದ ಈ ರಸ್ತೆಯಲ್ಲಿ ರಸ್ತೆ ಡುಬ್ಬ ಅಥವಾ ಬ್ಯಾರಿಕೆಡ್ ಹಾಕುವ ಮೂಲಕ ವಾಹನಗಳಿಗೆ ವೇಗ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದ ಸ್ಥಳೀಯರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಇನ್ನು ಮೃತ ಗರ್ಭಿಣಿಯ ಸಂಬಂಧಿಕರ ಆಕ್ರಂದನವಂತೂ ಮುಗಿಲು ಮುಟ್ಟುವಂತಿತ್ತು. ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ಶಂಕರ್ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಲ್ಲದೆ ನಮಿತಾ ಸಾವಿಗೆ ಸಂತಾಪ ಸೂಚಿಸಿ ಪರಿಹಾರದ ಹಣವಾಗಿ 25 ಸಾವಿರ ಅಂತ್ಯಕ್ರಿಯೆ ಖರ್ಚು ಮಾಡುವುದಕ್ಕೆ ಆದೇಶವಿದೆ ಚಾರ್ಜ್ ಶೀಟ್ ಬಳಿಕ 25 ಸಾವಿರ ನೀಡಲಾಗುವುದು. ಅನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು.
ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಮಾಡುತ್ತಿದ್ದವರ ಮನವೊಲಿಸಿದರು.