ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸ್ಟೇರಿಂಗ್ ರಾಡ್ ಕಟ್ಟಾದ ಪರಿಣಾಮ ಭತ್ತದಗದ್ದೆಗೆ ಬಸ್ ಬಿದ್ದಿರುವ ಘಟನೆ ಕೆ.ಆರ್. ನಗರದ ಶ್ರೀರಾಂಪುರ ಬಳಿ ನಡೆದಿದೆ.
ಸಾಲಿಗ್ರಾಮದಿಂದ ಮೈಸೂರಿಗೆ ಬಸ್ ತೆರಳುತ್ತಿತ್ತು. ಬಸ್ ಭತ್ತದ ಗದ್ದೆಗೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ 50 ಮಂದಿ ಗಾಯಗೊಂಡಿದ್ದು, ಹಲವರಿಗೆ ಕೈ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.
ಬಸ್ ಹಳ್ಳಕ್ಕೆ ಬಿದ್ದ ಕೂಡಲೇ ಇತ್ತ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಂದರೆ ಶಕ್ತಿಯೋಜನೆ ಜಾರಿಗೆ ಬಂದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದ್ದು ಆ ಪ್ರಯಾಣಿಕರಿಗೆ ತಕ್ಕ ಬಸ್‌ಗಳನ್ನು ಬಿಡದ ಪರಿಣಾಮ ಇಂಥ ಘಟನೆಗಳು ಸಂಭವಿಸುತ್ತಿವೆ.
ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಬಸ್‌ಗಳ ದುರಸ್ತಿಗಾಗಿ ಡಿಪೋಗಳಿಗೆ ತಿಂಗಳಿಗೆ ನೀಡುತ್ತಿರುವ ಕೋಟಿ ಕೋಟಿ ರೂಪಾಯಿಗಳನ್ನು ನುಂಗಿ ನೀರುಕುಡಿಯುವ ಮೂಲಕ ಕೊಳ್ಳೆಹೊಡೆಯುತ್ತಿದ್ದಾರೆ ಎಂದು ಸಂಸ್ಥೆಯ ಕಚೇರಿ ಸಿಬ್ಬಂದಿಗಳು ಆರೋಪ ಮಾಡಿದ್ದಾರೆ.
ಇನ್ನು ಈ ರೀತಿ ಕೋಟಿ ಕೋಟಿ ರೂಪಾಯಿ ಬಸ್ ದುರಸ್ತಿಗೆ ನಿಗಮದಿಂದ ಬಿಡುಗಡೆಯಾದರೂ ಅದನ್ನು ಕೃಷ್ಣನ ಲೆಕ್ಕಕ್ಕೆ ಹಾಕುವ ಮೂಲಕ ರಾಮನ ಲೆಕ್ಕ ತೋರಿಸಿ ಭ್ರಷ್ಟಾಚಾರದಲ್ಲಿ ಬಹುತೇಕ ಅಧಿಕಾರಿಗಳು ಮುಳುಗಿದ್ದು ಈ ಬಗ್ಗೆ ಸಾರಿಗೆ ಸಚಿವರು ಕ್ರಮ ತೆಗೆದುಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಮುಖವಾಗಿ ಬಸ್ ಸ್ಟೇರಿಂಗ್ ರಾಡ್ ಕಟ್ಟಾಗಿರುವುದಕ್ಕೆ ಚಾಲಕರಿಗೆ ಮೆಮೋ ಕೊಟ್ಟು ಬಳಿಕ ಬಸ್ ಸ್ಟೇರಿಂಗ್ ರಾಡ್‌ಗೆ ತಗಲು ಬೆಲೆಯನ್ನು ಚಾಲಕರಿಂದ ವಸೂಲಿ ಮಾಡುವುದಕ್ಕೂ ಈ ಭ್ರಷ್ಟ ಅಧಿಕಾರಿಗಳು ಮುಂದಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಕೂಡಲೇ ಎಂಡಿ ಅವರು ಈ ಬಗ್ಗೆ ಗಮನಹರಿಸಿ ಚಾಲಕನ ಮೇಲೆ ಹಾಕುವ ದಂಡವನ್ನು ತಪ್ಪಿಸಬೇಕು ಎಂದು ಸಂಸ್ಥೆಯ ಸ್ಟೋರ್‌ನಲ್ಲಿ ಕರ್ತವ್ಯ ನಿವರ್ಹಿಸುವ ಹಲವು ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.