ಚಿಕ್ಕಮಗಳೂರು: 10 ಸಾವಿರ ಲಂಚ ಸ್ವೀಕರಿಸುವ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಡೂರಿಗೆ ವರ್ಗಾವಣೆ ಮಾಡಿಕೊಡುವುದಕ್ಕೆ ಚಾಲಕಗೆ 10 ಸಾವಿರ ರೂ. ಲಂಚಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಬೇಡಿಕೆ ಇಟ್ಟಿದ್ದ. ಹಣ ಸ್ವೀಕರಿಸುವ ವೇಳೆ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಇದಿಷ್ಟೇ ಅಲ್ಲದೆ ನೌಕರರಿಗೆ ರಜೆ ನೀಡಲು, ಮಾರ್ಗಗಳ ಬದಲಾವಣೆ ಇತರೆ ವಿಷಯಗಳಲ್ಲಿ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೆ, ಅಪಾರ ಪ್ರಮಾಣದಲ್ಲಿ ಲಂಚದ ಬೇಡಿಕೆ ಇಡುತ್ತಿದ್ದ ಆರೋಪ ಈತನ ಮೇಲಿತ್ತು. ದಲಿತ ನೌಕರರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪವಿದ್ದು ಈ ಬಗ್ಗೆ ಪ್ರತಿಭಟನೆ ನಡೆದು ವರ್ಗಾವಣೆಗೂ ಒತ್ತಾಯಿಸಲಾಗಿತ್ತು.
ಕಳೆದ ಒಂದು ತಿಂಗಳ ಹಿಂದೆಯೇ ಈತನ ವರ್ಗಾವಣೆ ಆಗಿದ್ದರೂ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗದೆ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ. ಈ ವೇಳೆ ಮೇಲಧಿಕಾರಿಗಳು ಸಾರಿಗೆ ಸಚಿವರು ಹೀಗೆ ಹಲವು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಕೃಪಾಕಟಾಕ್ಷದಿಂದ ಇಲ್ಲೆ ಬೇರು ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ ಸಾರಿಗೆ ನೌಕರರ ಸುಲಿಗೆ ಕೋರ ಲಂಚಬಾಕ ಕೆಎಸ್‌ಆರ್‌ಟಿಸಿ ಅಧಿಕಾರಿ ಬಸವರಾಜು ಮತ್ತೆ ಡಿಸಿಯಾಗಿ ನೇಮಕ
ಈತ ಇಲ್ಲಷ್ಟೇ ಅಲ್ಲದೆ ಈ ಹಿಂದೆ ತುಮಕೂರು ವಿಭಾಗದಲ್ಲೂ ಇದೇ ಲಂಚವತಾರದಿಂದ ಇಲ್ಲಿಗೆ ವರ್ಗಾವಣೆಗೊಂಡಿದ್ದ. ಆದರೂ ತನ್ನ ಲಂಚಬಾಕತನವನ್ನು ಮುಂದರುವರಿಸಿದ್ದ. ಹೀಗಾಗಿ ಇದರಿಂದ ನಿಗಮದ ನೌಕರರು ಬೇಸತ್ತು ಹೋಗಿದ್ದರು. ಆದರೆ ಈಗ ಲೋಕಾಯುಕ್ತ ಬಲೆಗೆ ಬಿದಿದ್ದು, ಸದ್ಯ ನೌಕರರು ನಿರಾಳರಾಗಿರುವುದಾಗಿ ತಿಳಿಸಿದ್ದಾರೆ.
ಆದರೆ, ಈ ಲಂಚಾರೋಪದಲ್ಲಿ ಈತನಿಗೆ ಶಿಕ್ಷೆಯಾದರೆ ನೊಂದ ನೌಕರರಾದ ನಮಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ನೂರಾರು ನೊಂದ ನೌಕರರು ಹೇಳುತ್ತಿದ್ದಾರೆ.
ಇದನ್ನೂ ಓದಿ ತುಮಕೂರು: ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚಾವತಾರ- ದಿನಕ್ಕೆ 1ಲಕ್ಷ ರೂ. ಸೂಟ್‌ಕೇಸ್ ಇಲ್ಲದೆ ಮನಗೇ ಹೋಗಲ್ಲ
ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದಾಗ ಕಚೇರಿಗೆ ಹೋದಮೇಲೆ ದಿನಕ್ಕೆ 80 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳವರೆಗೆ ಲಂಚದ ಹಣವಿಲ್ಲದೆ ವಾಪಸ್ ಮನೆಗೆ ಹೋಗುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಚಾಲಕರು, ನಿರ್ವಾಹಕರು, ಚಾ ಕಂ ನಿ ಮತ್ತು ತಾಂತ್ರಿಕ ಸಿಬ್ಬಂದಿಗಳು ತುರ್ತು ಸಮಯದಲ್ಲಿ ಗೈರಾದರೆ, ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೆ ಅದನ್ನು ಮೌಖಿಕವಾಗಿ ಎಚ್ಚರಿಕೆ ನೀಡಿ ಕ್ಷಮಿಸಬಹುದು. ಆದರೆ ಅಂತಹ ಸಣ್ಣ ತಪ್ಪುಗಳಿಗೂ ಅಮಾನತು ಶಿಕ್ಷೆ ನೀಡಿ ಬಳಿಕ ಸಾವಿರಾರು ರೂ. ಲಂಚ ಪಡೆದು ಮರಳಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದ ಎಂಬ ಆರೋಪವಿತ್ತು.
ನೌಕರರಿಗೆ ಇಷ್ಟೆಲ್ಲ ತೊಂದರೆ ಕೊಡುತ್ತಿದ್ದ ಈ ವಿಭಾಗೀಯ ನಿಯಂತ್ರಣಾಧಿಕಾರಿಗೆ ನಿಯಂತ್ರಣಾಧಿಕಾರಿಯಾಗಿ ಪೂರ್ಣ ಪ್ರಮಾಣದಲ್ಲಿ ಇರುವ ಅರ್ಹತೆಯೇ ಇಲ್ಲ ಎಂದು ನೌಕರರು ಹೇಳುತ್ತಿದ್ದರು. ಈತನನ್ನು 17/1 ರಡಿ ಡಿಸಿ ಆಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿ ಇವರು ಕೇವಲ ಒಂದು ವರ್ಷದವರೆಗೆ ಮಾತ್ರ ಇರಬೇಕು ಎಂಬ ನಿಯಮವಿದೆಯಂತೆ ಆದರೆ ನೇಮಕಗೊಂಡು 3-4 ವರ್ಷವಾದರೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿದ್ದ.