NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಮಕ್ಕಳ ಗುರುತಿನ ಚೀಟಿ ಕಡ್ಡಾಯ ಮಾಡಿದರೂ ಪೋಷಕರ ಉಡಾಫೆ- ಕಂಡಕ್ಟರ್‌ಗಳಿಗೆ ತಲೆನೋವಾದ ಪಾಲಕರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾರಿಗೆ ಬಸ್‌ಗಳಲ್ಲಿ ಮಕ್ಕಳಿಗೆ ಆರು ವರ್ಷದ ತನಕ ಉಚಿತವಾಗಿ ಪ್ರಯಾಣಿಸಲು ನಿಗಮಗಳು ಅವಕಾಶ ಕಲ್ಪಿಸಿಕೊಟ್ಟಿದ್ದು, ಆ ಮಕ್ಕಳ ವಯಸ್ಸನ್ನು ನಿರ್ವಾಹಕರು ತಿಳಿದುಕೊಳ್ಳುವುದಕ್ಕೆ ಗುರುತಿನ ಚೀಟಿ ತೋರಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ನಿಗಮ ಆದೇಶ ಹೊರಡಿಸಿದೆ.

ಆದರೆ, ಮಕ್ಕಳ ವಯಸ್ಸನ್ನು ಮರೆ ಮಾಚಲು ಪೋಷಕರು ಗುರುತಿನ ಚೀಟಿ ತೋರಿಸದೆ ಉಡಾಫೆಯ ಉತ್ತರ ಕೊಡುತ್ತಿದ್ದಾರೆ. ಅಲ್ಲದೆ ಈ ವೇಳೆ ತನಿಖಾಧಿಕಾರಿಗಳು ಬಸ್‌ನಲ್ಲಿ ಟಿಕೆಟ್‌ ಚೆಕ್‌ ಮಾಡಲು ಬಂದರೆ ಅದಕ್ಕೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪೋಷಕರು ಯತ್ನಿಸುತ್ತಿದ್ದಾರೆ.

ಬಿಎಂಟಿಸಿ ಬಸ್‌ನಲ್ಲಿ ಇದೇ ಏ.7ರಂದು ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಬಸ್‌ ಹತ್ತಿದ ಮುಸ್ಲಿಂ ಮಹಿಳೆಯೊಬ್ಬರು ತನ್ನ ಆರು ವರ್ಷ ವಯಸ್ಸು ಮೀರಿದ ಪುತ್ರನನ್ನು ಜತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನಿರ್ವಾಹಕರು ಬಾಲಕನಿಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಆದರೆ ಆಕೆ ನನ್ನ ಮಗನಿಗೆ ಇನ್ನೂ 6 ವರ್ಷವಾಗಿಲ್ಲ ಎಂದು ಸುಳ್ಳು ಹೇಳಿದ್ದಾಳೆ. ಆಗ ಎಲ್ಲಿ ಬಾಲಕನ ಗುರುತಿನ ಚೀಟಿ ತೋರಿಸಿ ಎಂದು ಕೇಳಿದ್ದಕ್ಕೆ ತಂದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾಳೆ. ಬಳಿಕ ತನಿಖಾಧಿಕಾರಿಗಳು ಬಸ್‌ ಹತ್ತಿ ಟಿಕೆಟ್‌ ಚೆಕ್‌ ಮಾಡುತ್ತಿದ್ದಾಗ ಆ ಬಾಲಕನ ವಯಸ್ಸಿನ ಬಗ್ಗೆ ಅವರು ಕೂಡ ಗುರುತಿನ ಚೀಟಿ ತೋರಿಸುವಂತೆ ತಿಳಿಸಿದ್ದಾರೆ. ಆಗಲು ಉಡಾಫೆ ಮಾಡಿದ್ದಾಳೆ ಆ ಹೆಂಗಸು.

ಈ ವೇಳೆ ತನಿಖಾಧಿಕಾರಿಗಳು ಬಾಲಕನನ್ನು ವಿಚಾರಿಸಿದಾಗ ಆ ಹುಡುಗ ನಾನು 1ನೇ ತರಗತಿಯಲ್ಲಿ ಓದುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಟಿಕೆಟ್‌ ರಹಿತ ಪ್ರಯಾಣಕ್ಕೆ ದಂಡ ಕಟ್ಟುವಂತೆ ತನಿಖಾಧಿಕಾರಿಗಳು ಹೇಳಿದ್ದಾರೆ. ಆಗ ದಂಡಕಟ್ಟದೆ ಉದಾಸೀನತೆಯಿಂದ ಉತ್ತರ ಕೊಟ್ಟಿದ್ದಾಳೆ.

ಈ ನಡುವೆ ನಿರ್ವಾಹಕ ಮಾಡದ ತಪ್ಪಿಗೆ ಮೆಮೋ ಪಡೆಯಬೇಕಾಯಿತು. ಅಲ್ಲದೆ ಮುಂದೆ ಎದುರಾಗುವ ಸಮಸ್ಯೆಗೆ ಸಿದ್ಧರಾಗಬೇಕಾದ ಸ್ಥಿತಿ ಬಂತು. ಹೌದು! ನಿರ್ವಾಹಕ ಮಾಡದ ತಪ್ಪಿಗೆ ಆತನಿಗೆ ಮೆಮೋ ಕೊಡುವ ಬದಲಿಗೆ ಉದಾಸೀನತೆಯಿಂದ ನಡೆದುಕೊಂಡ ಮಹಿಳೆಗೆ ದಂಡ ಹಾಕಿ ಎಚ್ಚರಿಕೆ ನೀಡಿದ್ದರೆ ಮುಂದೆ ಇಂಥ ತಪ್ಪುಗಳಾಗುವುದನ್ನು ತಪ್ಪಿಸಬಹುದು.

ಇದರಿಂದ ಅಕ್ಕಪಕ್ಕದ ಸೀಟ್‌ನಲ್ಲಿ ಪ್ರಯಾಣಿಸುವ ಮಂದಿಗೂ ಕೂಡ ತಿಳಿವಳಿಯಾಗುತ್ತದೆ. ಅವರು ಮುಂದೆ ಈ ರೀತಿಯ ತಪ್ಪು ಮಾಡದಂತೆಯೂ ತಡೆಯಬಹುದು. ಅದನ್ನು ಬಿಟ್ಟು ಈ ರೀತಿ ನಿರ್ವಾಹಕರನ್ನು ಗುರಿಮಾಡುವುದು ಕಾನೂನು ಬಾಹಿರವಾಗುತ್ತದೆ ಅಲ್ಲವೇ..

ಇನ್ನು ಈ ಹಿಂದೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಕ್ಕಳ ವಯಸ್ಸನ್ನು ಪತ್ತೆಮಾಡಲು ಅಳತೆಗೋಲನ್ನು ಬಳಸಲಾಗುತ್ತಿತ್ತು. ಆದರೆ, ಇದು ಕೂಡಾ ಗೊಂದಲಕ್ಕೆ ಕಾರಣವಾಗಿತ್ತು. ಕೆಲವು ಐದು ವರ್ಷದ ಮಕ್ಕಳು ಕೂಡಾ 7 ವರ್ಷದವರಷ್ಟು ಬೆಳವಣಿಗೆಯಾಗಿರುವುದು ಕಂಡು ಬರುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ ನಡೆಯುತ್ತಿತ್ತು.

ಹೀಗಾಗಿ ಈಗ ಈ ರೀತಿಯ ವ್ಯವಸ್ಥೆಯಿಂದ ಇಂತಹ ವಾಗ್ವಾದಕ್ಕೆ ಕಡಿವಾಣ ಹಾಕಲು ಸಾರಿಗೆ ನಿಗಮಗಳು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಆದ್ದರಿಂದ 6 ವರ್ಷದ ಮಕ್ಕಳನ್ನು ಬಸ್‌ನಲ್ಲಿ ಪ್ರಯಾಣ ಮಾಡಲು ಕರೆದುಕೊಂಡು ಬರುವ ಪಾಲಕರು ಆ ಮಕ್ಕಳಿಗೆ ಸಂಬಂಧಿಸಿದ ವಯಸ್ಸಿನ ಗುರುತಿನ ಚೀಟಿ ತರುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಇನ್ನು ಈ ಬಗ್ಗೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿಗಮದ ಅಧಿಕಾರಿಗಳು ಸೂಚಿಸಿದ್ದು, ವಯಸ್ಸಿನ ಗುರುತಿನ ಚೀಟಿಗಾಗಿ ಎಲ್‌ಕೆಜಿ- ಯುಕೆಜಿ ಹಾಗೂ ಒಂದನೇ ತರಗತಿವರೆಗೆ ಕಲಿಯುತ್ತಿರುವ ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟಿರುವ ಐಡಿ ಕಾರ್ಡ್‌, ಆಧಾರ್‌ ಕಾರ್ಡ್‌, ಜನ್ಮ ಪ್ರಮಾಣ ಪತ್ರ ಸೇರಿದಂತೆ ಇತರೆ ಗುರುತಿನ ಚೀಟಿ ತರುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ಒಂದು ವೇಳೆ ಈ ಯಾವುದೇ ಚೀಟಿ ತರದಿದ್ದಲ್ಲಿ ಮಗು ಆರು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನದು ಎಂದು ನಿರ್ವಾಹಕರಿಗೆ ಅನಿಸಿದರೆ ಅವರು ಅರ್ಧ ಟಿಕೆಟ್‌ ಕೊಡುವುದಕ್ಕೆ ಪಾಲಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ. ಹೀಗಾಗಿ 6 ವರ್ಷ ವಯಸ್ಸಿನ ಮಕ್ಕಳ ಪಾಲಕರು ಇದನ್ನು ತಪ್ಪದೆ ಪಾಲಿಸಬೇಕು ಎಂದು ಸೂಚನೆ ನೀಡಿ ನಿಗಮವು ಆದೇಶ ಹೊರಡಿಸಿದೆ. ಆದರೂ ಈ ನಿಯಮವನ್ನೇ ಪೋಷಕರು ಗಾಳಿಗೆ ತೂರುತ್ತಿರುವುದು ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ