NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ವೇತನ ಪರಿಷ್ಕರಣೆ ಸಂಬಂಧ ಅ.11ರಂದು ಸಾರಿಗೆ ಕ್ರಿಯಾಸಮಿತಿ ಸಮಾವೇಶ – ಚಳವಳಿ ರೂಪಿಸಲು ಸಜ್ಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆಗಳ ಈಡೆರಿಕೆಗೆ ಕೂಡಲೇ ಸರ್ಕಾರ ಸಾರಿಗೆ ಸಂಘಟನೆಗಳ ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ  ಒತ್ತಾಯಿಸಿದೆ.

ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಯಾಸಮಿತಿಯ ಪದಾಧಿಕಾರಿಗಳು, ಈ ಸಂಬಂಧ ಅ.11 ರಂದು (ಮಂಗಳವಾರ) ಬೆಂಗಳೂರಿನ ಶೇಷಾದ್ರಿಪುರಂನ ಗುಂಡೂರಾವ್‌ ಸಭಾಂಗಣದಲ್ಲಿ ಜಂಟಿ ಕ್ರಿಯಾಸಮಿತಿಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಸಭೆ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಈಗಾಗಲೇ ಸಾರಿಗೆ ನೌಕರರ ವೇತನ ಹೆಚ್ಚಳದ ವಿಷಯ ಸುಮಾರು 33 ತಿಂಗಳುಗಳಿಂದ ಚರ್ಚೆಯಾಗುತ್ತಿದೆ. ಅದರಿಂದ ನೌಕರ ವರ್ಗದಲ್ಲಿ ಸಾಕಷ್ಟು ಆಶಾಂತಿ ಮೂಡಿದೆ. ನಾವು 02/09/2022 ರಂದು ಪತ್ರ ಮೂಲಕ ಈ ವಿಷಯದಲ್ಲಿ ಮುಖ್ಯ ಮಂತ್ರಿಯವರ ಗಮನ ಸೆಳೆದಿದ್ದೇವೆ. ಅವರ ಜತೆ ಚರ್ಚಿಸಲು ಸಮಯ ಕೇಳಿದ್ದೇವೆ. ಇಲ್ಲಿಯವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಥವಾ ಮಾತುಕತೆ ನಡೆಸುವಂತೆ ಸಾರಿಗೆ ನಿಗಮಗಳಿಗೆ ಆದೇಶ ಬಂದಿಲ್ಲ. ಆದ್ದರಿಂದ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ 6 ಸಂಘಟನೆಗಳು ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ, ಬೇಡಿಕೆಗಳ ಇತ್ಯರ್ಥಕ್ಕೆ ಚಳವಳಿ ರೂಪಿಸಲು ತೀರ್ಮಾನಿಸಿವೆ ಎಂದರು.

ಈ ದೃಷ್ಟಿಯಿಂದ ಪ್ರಥಮ ಹಂತವಾಗಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರ ಮೂರು ಸಮಾವೇಶಗಳನ್ನು ಬೆಂಗಳೂರು, ಕಲ್ಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದರಂತೆ ಅ.11ರಂದು ಬೆಂಗಳೂರಿನ ಶೇಷಾದ್ರಿಪುರಂನ ಗುಂಡೂರಾವ್‌ ಸಭಾಂಗಣದಲ್ಲಿ ಸಮಾವೇಶ ನಡೆಯುತ್ತದೆ. ಅಲ್ಲಿ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.

ಇನ್ನು ಈ ಜಂಟಿ ಸಮಿತಿಯು ವಾಯವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ಗುತ್ತಿಗೆ ಪದ್ಧತಿಯ ಮೂಲಕ ಸಿಬ್ಬಂದಿಗಳನ್ನು ನೇಮಿಸುವುದನ್ನು ನಿಲ್ಲಿಸಬೇಕೆಂದು ಆಡಳಿತ ವರ್ಗವನ್ನು ಒತ್ತಾಯಿಸಿದೆ. ಅದೇ ರೀತಿಯಲ್ಲಿನಿಗಮಗಳಿಗೆ ಸೇರಿರುವ 41 ಮಾರ್ಗಗಳನ್ನು ಖಾಸಗಿಯವರಿಗೆ ಕೊಡುವುದನ್ನು ರದ್ದು ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

ನಾಲ್ಕು ಸಾರಿಗೆ ನಿಗಮಗಳಲ್ಲಿ (ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ವಾಯವ ಮತ್ತು ಕಲ್ಯಾಣ ಕರ್ನಾಟಕ) ಸುಮಾರು ಒಂದು ಲಕ್ಷ ಏಳು ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡುವ ಪರಂಪರೆ ಇದೆ. 1996ಕ್ಕೆ ಮುಂಚೆ ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳ ಇತ್ಯಾದಿ ಸೌಲಭ್ಯಗಳ ಬಗ್ಗೆ ಆಡಳಿತ ವರ್ಗಕ್ಕೆ ಕೊಡುತ್ತಿದ್ದ ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಕೈಗಾರಿಕಾ ವಿವಾದ ಕಾಯಿದೆ 1947ರ ಪ್ರಕಾರ ದ್ವಿಪಕ್ಷೀಯ ಒಪ್ಪಂದಗಳಾಗುತ್ತಿದ್ದವು ಎಂದರು.

1996ರ ನಂತರ ಆಡಳಿತ ವರ್ಗ ಏಕ ಪಕ್ಷೀಯವಾಗಿ ವೇತನ ಹೆಚ್ಚಳ ಮಾಡುತ್ತಿತ್ತು. 2012 ಮತ್ತು 2016 ರಲ್ಲಿ ಸಾರಿಗೆ ನೌಕರರ ರಾಜ್ಯವ್ಯಾಪಿ ಮುಷ್ಕರಗಳ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ವೇತನ ಪರಿಷ್ಕರಣೆ ಆಯಿತು ಎಂದು ಹೇಳಿದರು.

ಹೊಸ ಬೇಡಿಕೆಗಳ ಪ್ರಣಾಳಿಕೆ: 2019 ರ ಕೊನೆಭಾಗದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳೂ ಬೇರೆ ಬೇರೆ ಬೇಡಿಕೆಗಳನ್ನು ಸಾರಿಗೆ ನಿಗಮಗಳ ಆಡಳಿತವರ್ಗಕ್ಕೆ ಕೊಟ್ಟಿದ್ದವು. 01.01.2020 ರಿಂದ ವೇತನ ಹೆಚ್ಚಳ ಆಗಬೇಕಾಗಿದೆ. ಬಹುಶಃ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಉಭಯತ್ರರಿಗೂ ಒಪ್ಪಿಗೆ ಆಗುವ ವೇತನ ಒಪ್ಪಂದ ಆಗಿದ್ದರೆ, ಇಂದು ಪರಿಸ್ಥಿತಿ ಬೇರೆ ಇರುತ್ತಿತ್ತು. ಆದರೆ ಅಂದಿನ ಅಧಿಕಾರ ವರ್ಗಕ್ಕೆ ದೂರದೃಷ್ಟಿ ಇರಲ್ಲಿಲ್ಲ ಹಾಗೂ ಇನ್ನೂ ಇತರ ಕಾರಣಗಳಿಂದ ಕೈಗಾರಿಕಾ ಒಪ್ಪಂದ ಆಗಲ್ಲಿಲ್ಲ ಎಂದು ತಿಳಿಸಿದರು.

ಇನ್ನು ಅದೇನೇ ಇರಲಿ ಇಂದು ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ಸಾರಿಗೆ ನಿಗಮಗಳ ನೌಕರರು ಜೀವನ ನಡೆಸುವುದೇ ಕಷ್ಟವಾಗಿದೆ. ನಾವು ನಮ್ಮ ಜಂಟಿ ಕ್ರಿಯಾ ಸಮಿತಿ ವತಿಯಿಂದ 10 ಅಂಶಗಳ ಬೇಡಿಕೆಗಳ ಪ್ರಣಾಳಿಕೆಯನ್ನು 08.08.2022 ರಂದು ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಕೊಟ್ಟಿದ್ದೇವೆ. ವೇತನ, ಬಾಟ ಇತ್ಯಾದಿಗಳ ಹೆಚ್ಚಳ, ಉತ್ತಮ ವೈದ್ಯಕೀಯ ಸೌಲಭ್ಯ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿಗದಿ ಪಡಿಸುವುದು (ಫಾರಂ-4).

ಮಹಿಳಾ ನೌಕರರಿಗೆ ಸಂಬಂಧಪಟ್ಟ ಕೆಲವು ಬೇಡಿಕೆಗಳು, ಉತ್ತಮವಾದ ಪೆನ್ಶನ್, ಕೈಗಾರಿಕಾ ಒಪ್ಪಂದಗಳಂತೆ ಗ್ರಾಚ್ಯುಯಿಟಿ ಕೊಡುವುದು ಹಾಗೂ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವುದು ಮುಂತಾದ ಬೇಡಿಕೆಗಳ ಬಗ್ಗೆ ಕೆ.ಎಸ್.ಆರ್.ಟಿ.ಸಿ ಆಡಳಿತ ವರ್ಗಕ್ಕೆ ವಿವರವಾಗಿ ತಿಳಿಸಿದ್ದೇವೆ. ಸರ್ಕಾರದಿಂದ ಸೂಚನೆ ಬಂದನಂತರ ನಮ್ಮೊಡನೆ ಮಾತುಕತೆ ನಡೆಸುವ ಆಶ್ವಾಸನೆ ಕೊಟ್ಟಿದ್ದರು. ಈವರೆಗೂ ನಮ್ಮ ಸಮಿತಿಗೆ ಆಡಳಿತ ವರ್ಗದಿಂದ ಮಾತುಕತೆ ಬಗ್ಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ವರ್ಕರ್ಸ್‌ ಫಡರೇಷನ್‌ನ ವಿಜಯಭಾಸ್ಕರ.ಡಿ.ಎ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳದ ಬಿ.ಜಯದೇವರಾಜೇಅರಸ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು)ನ ಎಚ್.ಡಿ. ರೇವಪ್ಪ, ಕೆ.ಎಸ್. ಆರ್.ಟಿ.ಸಿ & ಬಿಎಂಟಿಸಿ ಯುನೈಟೆಡ್’ ಎಂಪ್ಲಾಯೀಸ್ ಯೂನಿಯನ್‌ನ ಕೆ.ಆರ್. ವಿಜಯಕುಮಾರ್, ಕೆ.ಎಸ್.ಆರ್.ಟಿ.ಸಿ ಎಸ್.ಸಿ & ಎಸ್.ಟಿ ಎಂಪ್ಲಾಯೀಸ್ ಯೂನಿಯನ್‌ನ ವೆಂಕಟರಮಣಪ್ಪ, ಕ.ರಾ.ರ.ಸಾ ಸಂಸ್ಥೆ ಪ.ಜಾ/ಪ.ಪಂ ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಂ. ಮಲ್ಲಿಕಾರ್ಜುನ ಮೂರ್ತಿ ಮತ್ತು ಬಿಎಂಎಸ್‌ನ ಮಹದೇವಯ್ಯ ಇದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ