ಕೊಡಗು: ಸಾರಿಗೆ ನೌಕರರು ಮೇಲಧಿಕಾರಿಗಳ ಕಿರುಕುಳಕ್ಕೆ ಬೆಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬರುತ್ತಿದೆ. ಇಂದು (ಆ.29) ವಿಷ ಸೇವಿಸಿ KSRTC ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮಡಿಕೇರಿ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದಿದೆ.
ಮಡಿಕೇರಿ ಕೆಎಸ್ಆರ್ಟಿಸಿ ಡಿಪೋನ ಲೆಕ್ಕ ಸಹಾಯಕ ಅಭಿಷೇಕ್ (27) ಆತ್ಮಹತ್ಯೆಗೆ ಯತ್ನಿಸಿದ ನೌಕರ. ಸದ್ಯ ಅಸ್ವಸ್ಥಗೊಂಡ ಅಭಿಷೇಕ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಎರಡು ದಿನ ಏನನ್ನು ಹೇಳಲಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಘಟಕ ವ್ಯವಸ್ಥಾಪಕಿ ಗೀತಾ ನಿತ್ಯ ಕಿರುಕುಳ ನೀಡುತ್ತಿದ್ದರು. ಆದರೂ ಸಹಿಸಿಕೊಂಡು ಕೆಲಸ ಮಾಡಿಕೊಂಡು ಹೋತ್ತಿದ್ದೇವೆ. ಈ ನಡುವೆ ಕಿರುಕುಳ ಹೆಚ್ಚಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕೂಡ ಬರೆದಿದ್ದರು. ಆದರೂ ಈ ಬಗ್ಗೆ ಎಂಡಿ ಅನ್ಬುಕುಮಾರ್ ಅವರು ಯಾವುದೇ ಕ್ರಮ ಜರುಗಿಸದಿರುವುದು ಇಂದು ಈ ಅವಘಡಕ್ಕೆ ಕಾರಣವಾಗಿದೆ.
ಘಟನೆ ವಿವರ: ಕೆಎಸ್ಆರ್ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಜಯಕರ ಶೆಟ್ಟಿ ಜತೆಗೆ ಮಂಗಳವಾರ ಸಂಜೆ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾನೆ ಅಭಿಷೇಕ್. ಆದರೂ ಡಿಸಿ ಡಿಎಂ ಪರವಾಗಿಯೇ ಮಾತನಾಡಿದ್ದಾರೆ. ಇದರಿಂದ ನೊಂದ ಅಭಿಷೇಕ್ ನನಗೆ ವಾರ್ಷಿಕ ಬಡ್ತಿಕೂಡ ಕಡಿತಗೊಳ್ಳಲು ಕಾರಣರಾದ ಡಿಎಂ ಪರವಾಗಿಯೇ ನೀವು ನಿಂತುಕೊಂಡರೆ ಹೇಗೆ ಸರ್ ಎಂದು ಕೇಳಿದ್ದಾರೆ.
ಅದಕ್ಕೆ ಡಿಸಿ ನೀನಿ ಎಂಡಿ ಅವರಿಗೆ ಪತ್ರ ಬರೆದು ಎಲ್ಲವನ್ನು ಹೇಳುತ್ತೀಯಲ್ಲ ಅಲ್ಲೇಯೆ ಹೋಗಿ ಕೇಳು ಎಂದು ಬೆದರಿಸಿದ್ದಾರೆ. ಇದರಿಂದ ಇನ್ನಷ್ಟು ಕುಗ್ಗಿಹೋದ ಅಭಿಷೇಕ್ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಷೇಕ್ನನ್ನು ಅಲ್ಲಿನ ಸಿಬ್ಬಂದಿ ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆತ್ಮಹತ್ಯೆ ಯತ್ನಕ್ಕೂ ಮೊದಲು ಬೆಂಗಳೂರಿನ ಕೇಂದ್ರ ಕಚೇರಿಯ ವ್ಯವಸ್ಥಾಪಕರಿಗೆ ಅಭಿಷೇಕ್ ಪತ್ರ ಬರೆದಿದ್ದಾರೆ. ವ್ಯವಸ್ಥಾಪಕಿ ಹಾಗೂ ಡಿಸಿ ತಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಅಭಿಷೇಕ್ ತಾವು ಬರೆದ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ನನ್ನ ಆತ್ಮಹತ್ಯೆಗೆ ಇವರಿಬ್ಬರೇ ನೇರ ಕಾರಣ ಎಂದು ಅವರು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಭಿಷೇಕ್ ತಾಯಿ ಆರೋಪ : ’’ನನ್ನ ಮಗನಿಗೆ ಪುತ್ತೂರಿನಲ್ಲಿ ಕಿರುಕುಳ ನೀಡಿದರು. ಬಳಿಕ ಅಲ್ಲಿಂದ ನನ್ನ ಮಗ ಮಡಿಕೇರಿ ಡಿಪೋಗೆ ವರ್ಗಾಯಿಸಿಕೊಂಡ. ಆಗಲೂ ಸಹ ಪುತ್ತೂರಿನಲ್ಲಿ ಕಿರುಕುಳ ತಪ್ಪಿರಲಿಲ್ಲ. ಬಳಿಕ ಮಡಿಕೇರಿಗೆ ಬಂದಾಕ್ಷಣವೂ ಕಿರುಕುಳ ಮುಂದುವರಿಯಿತು. ಕಳೆದ ಮೂರು ವರ್ಷಗಳಿಂದ ಇಲ್ಲಿ ನನ್ನ ಮಗ ಕಾರ್ಯ ನಿರ್ವಹಿಸುತ್ತಿದ್ದಾನೆ. ಇತ್ತಿಚೇಗೆ ಆತನಿಗೆ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ಆತ ರಾತ್ರಿ 12 ಗಂಟೆ ಕಳೆದ್ರೂ ಸಹ ಕೆಲಸ ಮಾಡುತ್ತಿದ್ದನು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಅಭಿಷೇಕ್ ತಾಯಿ ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿರುವ ಅಭಿಷೇಕ್ ಬರೆದಿರುವ ಪತ್ರ ಸಹ ಲಭ್ಯವಾಗಿದೆ. ಇನ್ನು ವಾರ್ಷಿಕ ಗುಣ ವಿಮರ್ಶೆಯಲ್ಲಿ ಅಭಿಷೇಕ್ ಬಗ್ಗೆ ಡಿಎಂ ಗೀತಾ ಮತ್ತು ಡಿಸಿ ಅವರು ಅತೃಪ್ತಿಕರ ಎಂದು ವರದಿಕೊಟ್ಟಿದ್ದರು. ಈ ಸಂಬಂಧ ಅಭಿಷೇಕ್ಗೆ ನೋಟಿಸ್ ಸಹ ಜಾರಿಯಾಗಿತ್ತು, ಈ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸದ್ಯ ಅಭಿಷೇಕ್ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.