KSRTC- ಶಿಸ್ತು ನಿಯಮಗಳು ಕಿರುಕುಳವಾಗಲು ಬಿಡುವುದಿಲ್ಲ : ಎಂಡಿ ಅನ್ಬುಕುಮಾರ್ ಭರವಸೆ
ತುಮಕೂರಿಗೆ ಭೇಟಿ ನೀಡಿ ನೌಕರರ ಸಮಸ್ಯೆ ಆಲಿಕೆ
ತುಮಕೂರು: ನಿಮ್ಮನ್ನು ಅಧಿಕಾರಿಗಳು ತುಳಿಯುತ್ತಿದ್ದಾರೆ ಎಂದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ, ಅವರಿಗೂ ತಕ್ಕ ಶಿಕ್ಷೆ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ನೌಕರಿಗೆ ಭರವಸೆ ನೀಡಿದರು.
ಗುರುವಾರ ತುಮಕೂರಿಗೆ ಭೇಟಿ ನೀಡಿ ನೌಕರರ ಸಮಸ್ಯೆ ಆಲಿಸಿದ ಅವರು, ಬಳಿಕ ಮಾತನಾಡಿ, ನಾವು ಈಗಾಗಲೇ ವಜಾಗೊಂಡವರನ್ನು ವಾಪಸ್ ತೆಗೆದುಕೊಂಡಿದ್ದೇವೆ. ನಿಮ್ಮ ವಿರುದ್ಧ ದಾಖಲಾಗಿದ್ದ ಕೇಸ್‌ಗಳನ್ನು ವಾಪಸ್ ಪಡೆದಿದ್ದೇವೆ. ಜತೆಗೆ ಗೈರಾಗಿದ್ದವರನ್ನು 500 ರೂ. ದಂಡ ಹಾಕುವ ಮೂಲಕ ಡ್ಯೂಟಿಕೊಟ್ಟಿದ್ದೇವೆ. ಇನ್ನು ನಿಮಗೆ ಯಾವುದೇ ಕಿರುಕುಳ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದರು.
ಇನ್ನು ಎನ್‌ಐಎನ್‌ಸಿ ನಿಯಮ ಜಾರಿಗೆ ತಂದರೆ ಅದರಿಂದ ಶೇ.90ರಷ್ಟು ನೌಕರರಿಗೆ ಅನುಕೂಲವಾಗುತ್ತದೆ ಅದೊಂದನ್ನು ಜಾರಿ ಮಾಡಿ ಎಂದು ನೌಕರರು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಎಂಡಿ ಆದಷ್ಟು ಶೀಘ್ರದಲ್ಲೇ ಅದನ್ನು ಪರಿಶೀಲನೆ ಮಾಡಿ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ನೀವು ಪ್ರಾಮಾಣಿಕವಾಗಿ ದುಡಿಯ ಬೇಕು: ಸಂಸ್ಥೆಗೆ ನಿತ್ಯ 2 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಹಾಗಂತ ನಿಮ್ಮ ವೇತನ ಕೊಡುವುದನ್ನು ನಿಲ್ಲಿಸಿದ್ದೇವೆಯೇ ಇಲ್ಲ. ಅದರಂತೆ ನೀವು ಸಂಸ್ಥೆಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿದರೆ ಸಂಸ್ಥೆಯೂ ಬೆಳೆಯುತ್ತದೆ ನೀವು ಕೂಡ ಚೆನ್ನಾಗಿರುತ್ತೀರಿ ಎಂದು ಸಲಹೆ ನೀಡಿದರು.
ಇನ್ನು ನೋಡಿ 65 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಲ್ಲೋ ಒಂದು ಟಿಕೆಟ್ ಮಿಸ್ ಆಗಿದೆ ಎಂದರೆ ಓಕೆ ಆದರೆ, 17 ಮಂದಿ ಪ್ರಯಾಣಿಸುತ್ತಿರುವಾಗ ಒಂದು ಟಿಕೆಟ್ ಮಿಸ್ಸಾಗಿದೆ ಎಂದರೆ ನಿಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಆ ರೀತಿ ಮಾಡಬೇಡಿ ಎಂದು ಎಚ್ಚರಿಕೆಯ ಪಾಠ ಮಾಡಿ ಸಲಹೆ ನೀಡಿದರು.
ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗಲು ನೀವು ಕೂಡ ಡೀಸೆಲ್ ಉಳಿತಾಯ ಸೇರಿದಂತೆ ಇತರ ಉತ್ತಮ ಕ್ರಮವನ್ನು ಅನುಸರಿಸಬೇಕು. ನೀವು ನಮ್ಮೊಂದಿಗೆ ಸಹಕರಿಸಿದರೆ ನಾವು ನಿಮಗೆ ಏನು ಅನುಕೂಲಬೇಕೋ ಅದನ್ನು ಮಾಡಿಕೊಡಬಹುದು. ಜತೆಗೆ ಸಂಸ್ಥೆಯು ಆರ್ಥಿಕವಾಗಿ ಸಬಲವಾಗಲಿದೆ ಅಲ್ಲವೆ ಎಂದು ಹೇಳಿದರು.
ಇನ್ನು ಸಂಸ್ಥೆಯಲ್ಲಿ ನಿಮಗೆ ಕಿರುಕುಳ ಕೊಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಹಾಗಂತ ನೀವು ಶಿಸ್ತು ನಿಯಮ ಮೀರಿ ನಡೆದುಕೊಳ್ಳಬಾರದು, ನೀವು ನಿಯಮ ಮೀರಿದರೆ ನಿಮ್ಮನ್ನು ಬಿಡುವುದಿಲ್ಲ. ಸರ್ಕಾರ ನಾವು ಅಶಿಸ್ತಿನಿಂದ ನಡೆದುಕೊಂಡ ಬಿಡುತ್ತದೆಯೇ ಅದೇ ರೀತಿ ನೀವು ಕೂಡ ಎಂಬ ಎಚ್ಚರಿಕೆಯನ್ನು ನೀಡಿದರು.