ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಮರೆತು ಹೋಗಿದ್ದ ಮಹಿಳೆಗೆ ಹಿಂದಿರುಗಿಸುವ ಮೂಲಕ ಸಂಸ್ಥೆಯ ಬಸ್ ಚಾಲಕ ಹಾಗೂ ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.
ಕರ್ನೂಲ್ ಜಿಲ್ಲೆಯ ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್‌ನಲ್ಲಿ ಮೂರು ಲಕ್ಷ ರೂ. ಬೆಲೆಬಾಳುವ ಒಡವೆಗಳಿದ್ದ ಬ್ಯಾಗನ್ನು ಮರೆತು ಹೋಗಿದ್ದರು. ಅದನ್ನು ಗಮನಿಸಿದ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಅವರು ಒಡವೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆ ಪತ್ತೆ ಮಾಡಿ ಶಿರಾ ಘಟಕದಲ್ಲಿದ್ದ ಒಡವೆ ವಾಪಸ್ ನೀಡಲಾಗಿದೆ. ಚಾಲಕ ಹಾಗೂ ನಿರ್ವಾಹಕರ ಮಾನವೀಯತೆಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಇನ್ನು ಕಳೆದುಕೊಂಡಿದ್ದ ಒಡೆವೆಗಳನ್ನು ಪಡೆದುಕೊಂಡ ಮಹಿಳೆ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಅವರಿಗೆ ಕೈ ಮುಗಿದು ನಿಮ್ಮಂಥವರು ಸಂಸ್ಥೆಯಲ್ಲಿ ಇರುವುದರಿಂದಲೇ ನಮ್ಮಂಥವರಿಗೆ ಒಳ್ಳೆಯದಾಗುತ್ತಿದೆ ಎಂದು ಭಾವುಕರಾಗಿ ಅಭಿನಂದನೆ ತಿಳಿಸಿದರು.
ಇನ್ನು ನಾನು ಆರ್ಥಿಕವಾಗಿ ಅಷ್ಟು ಶಕ್ತಳಲ್ಲ ಇಂಥ ವೇಳೆ 3 ಲಕ್ಷ ರೂ.ಮೌಲ್ಯದ ಒಡವೆ ಕಳೆದುಹೋದರೆ ಅಷ್ಟು ಹಣ ದುಡಿಯುವುದಕ್ಕೆ ನಮಗೆ ವರ್ಷಗಳೇ ಬೇಕಾಗುತ್ತಿದೆ. ನಾನು ಬ್ಯಾಗ್ ಕಳೆದು ಹೋದಾಗ ತುಂಬ ಆಘಾತವಾಗಿತ್ತು. ಮತ್ತೆ ಸಿಗುತ್ತವೋ ಇಲ್ಲವೋ ಎಂಬ ಭಯವಿತ್ತು. ಆದರೆ ಸಂಸ್ಥೆಯ ನಮ್ಮ ಅಣ್ಣಂದಿರುವ ವಾಪಸ್ ಕೊಟ್ಟಿರುವುದರಿಂದ ನನಗೆ ತುಂಬ ಸಂತೋಷವಾಗುತ್ತಿದೆ ಎಂದು ಹೇಳಿದರು.