NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರನ ಅವಲಂಬಿತ ಮಗಳು- ಸಹೋದರಿಗೂ ಅನುಕಂಪದ ನೇಮಕಾತಿಗೆ ಅವಕಾಶ- ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಅಕಾಲಿಕ ಮರಣಕ್ಕೆ ತುತ್ತಾದರೆ ಆ ನೌಕರರನ ಸಹೋದರಿ ಸೇರಿದಂತೆ ಇತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ಪಾಷ ತಿಳಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಮಾ.13ರಂದು ಆದೇಶ ಹೊರಡಿಸಿದ್ದು, ಇದರಲ್ಲಿ ಸಾರಿಗೆ ನೀತಿ-2018ರ ಮುಂದುವರಿದ ನಿರ್ದೇಶನಗಳನ್ನು ನೀಡಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನೀತಿ-2018ನ್ನು ನಿಗಮದಲ್ಲಿ ಜಾರಿಗೆ ತರಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನೀತಿ-2018 ರಡಿ ಮೃತ ನೌಕರರ ಮಗಳು/ ಸಹೋದರಿ ವಿಷಯದಲ್ಲಿ “ಕುಟುಂಬ” ಎಂಬ ಪದವನ್ನು ಉಲ್ಲೇಖಿಸಿ ಈ ಕೆಳಗಿನಂತೆ ಪರಿಭಾಷಿಸಲಾಗಿದೆ.

ಅದರಂತೆ. ಮೃತಾವಲಂಬಿತರ ಮಗಳು/ ಸಹೋದರಿಯ ವಿಷಯದಲ್ಲಿ ಅನುಕಂಪದ ಅಧಾರದ ಮೇಲೆ ನೇಮಕಾತಿಗೆ ಮೃತ ವಿವಾಹಿತ ನಿಗಮದ ನೌಕರರ ಅವಲಂಬಿತ ಅವಿವಾಹಿತ/ ವಿವಾಹಿತ/ ವಿಚ್ಛೇದಿತ/ ವಿಧವೆ ಮಗಳು ಅಥವಾ ಅವಿವಾಹಿತ ನೌಕರರ ಅವಲಂಬಿತ ಅವಿವಾಹಿತ/ ವಿವಾಹಿತ/ ವಿಚ್ಚೇದಿತ/ ವಿಧವೆ ಸಹೋದರಿಯು ನಿಗಮದ ಮೃತ ನೌಕರರ ಜೀವಿತಾವಧಿಯಲ್ಲಿ ಅವರಿಗೆ ಅವಲಂಬಿತರಾಗಿದ್ದು, ಜೀವಿತಾವಧಿಯಲ್ಲಿ ಅವರೊಂದಿಗೆ ವಾಸವಿದ್ದ ಸಂಬಂಧಪಟ್ಟ ತಹಸೀಲ್ದಾರ್ ಅವರು ನೀಡುವ ವಾಸಸ್ಥಳ ಪ್ರಮಾಣ ಪತ್ರ ಪರಿಗಣಿಸಲು ನಿಗಮದ ನಿರ್ದೇಶಕರ ಮಂಡಳಿಯು ಒಪ್ಪಿಗೆ ನೀಡಿದೆ.

ಅದರಂತೆ, ಮೃತಾವಲಂಬಿತರ ಮಗಳು/ ಸಹೋದರಿಯ ವಿಷಯದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಮೃತ ನೌಕರರ ಜೀವಿತಾವಧಿಯಲ್ಲಿ ಅವರೊಂದಿಗೆ ವಾಸವಿದ್ದ ಕುರಿತು ಸಂಬಂಧಪಟ್ಟ ತಹಸೀಲ್ದಾರ್ ಅವರು ನೀಡುವ ವಾಸಸ್ಥಳ ಪ್ರಮಾಣ ಪತ್ರ ಪರಿಗಣಿಸುವ ಮೂಲಕ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು. ಉಳಿದಂತೆ, ಉಲ್ಲೇಖಿತ ನೀತಿ ಹಾಗೂ ಸುತ್ತೋಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!