- ಈ ಯೋಜನೆಗೆ ನೌಕರರ ಮಾಸಿಕ ವಂತಿಕೆ ಪ್ರಸ್ತುತ 100 ರೂ.ಗಳಿಂದ 200 ರೂ.ಗಳಿಗೆ ಏರಿಸಿ ಪರಿಷ್ಕರಣೆ
- ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುವ ₹50 ವಂತಿಕೆಯನ್ನು ₹ 100ಕ್ಕೆ ಹೆಚ್ಚಳ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ (KSRTC) ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಈಗಿದ್ದ ಪರಿಹಾರ ಮೊತ್ತ 3 ಲಕ್ಷ ರೂ.ಗಳಿಂದ 10 ಲಕ್ಷ ರೂ. ಗಳಿಗೆ ಏರಿಕೆ ಮಾಡುವ ಮೂಲಕ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಆದರೆ, ಈ ಯೋಜನೆಗೆ ಪ್ರತಿತಿಂಗಳು ನೌಕರರ ವೇತನದದಿಂದ ಈವರೆಗೂ ಕಡಿತ ಮಾಡಿಕೊಳ್ಳುತ್ತಿದ್ದ 100 ರೂ. ಬದಲಿಗೆ 200 ರೂ.ಗಳನ್ನು ಪ್ರತಿ ತಿಂಗಳು ಕಡಿತ ಮಾಡಿಕೊಂಡು 10 ಲಕ್ಷ ರೂಪಾಯಿ ಪರಿಹಾರ ಕೊಡುವುದಕ್ಕೆ ನಿಗಮವು ಮುಂದಾಗಿದ್ದು, ನೌಕರರ ವೇತನದಲ್ಲಿ 200 ರೂ.ಗಳನ್ನು ನವೆಂಬರ್‌ನಿಂದಲೇ ಕಡಿತ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದಲೂ ಬೆಲೆ ಕಟ್ಟಲಾಗದು. ಆದರೆ, ನೌಕರರ ಮರಣ ಹೊಂದಿದ್ದಲ್ಲಿ, ಅವರ ಅವಲಂಬಿತರಿಗೆ ಆದಷ್ಟೂ ಆರ್ಥಿಕವಾಗಿ ಸಹಾಯ ಮಾಡುವುದು ನಿಗಮದ ಸದುದ್ದೇಶವಾಗಿದೆ. ಹೀಗಾಗಿ ಈ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ 100 ರೂ.ಗಳಿಂದ 200 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಇನ್ನು ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ 50 ರೂ.ಗಳ ವಂತಿಕೆಯನ್ನು 100 ರೂ.ಗಳಿಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಪರಿಷ್ಕೃತ ಆದೇಶವು 01.11.2023 ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ ಎಂದು ತಿಳಿಸಿದೆ.
ಇನ್ನು ವಿವಿಧ ಕಾಯಿಲೆಗಳು ಸೇರಿದಂತೆ ಇತರ ಕಾರಣದಿಂದ ಪ್ರತಿ ವರ್ಷ 100ಕ್ಕೂ ಹೆಚ್ಚು ನೌಕರರು ಅಕಾಲಿಕ ಮರಣ ಹೊಂದುತ್ತಿದ್ದು, ಅವರ ಕುಟುಂಬದವರಿಗೆ ಈ ನೌಕರರ ಕುಟುಂಬ ಕಲ್ಯಾಣ ಯೋಜನೆ ನೆರವಾಗಲಿದೆ.
ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ನಿಗಮದಿಂದ ಅವರಿಗೆ ನೆರವಾಗಲು 3 ಲಕ್ಷ ರೂ. ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸದುದ್ದೇಶ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನು 10 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಸಾರಿಗೆ ನಿಗಮಗಳಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ, 1 ಕೋಟಿ ರೂ. ಮೊತ್ತದ ಆರ್ಥಿಕ ಪರಿಹಾರವನ್ನು ಬ್ಯಾಂಕ್‌ಗಳೊಂದಿಗೆ ಒಡಂಬಳಿಕೆ ಮಾಡಿಕೊಂಡು ಒದಗಿಸುತ್ತಿದೆ.
ಈವರೆಗೂ 7 ಪ್ರಕರಣಗಳಲ್ಲಿ ಅಪಘಾತದಿಂದ ಮೃತಪಟ್ಟ ನೌಕರರ ಅವಲಂಬಿತರಿಗೆ ತಲಾ 1 ಕೋಟಿ ರೂ.ಗಳ ಚೆಕ್ ನೀಡಲಾಗಿದೆ. ಇನ್ನು ಮುಂದುವರೆದು, ಅಪಘಾತ ಹೊರತುಪಡಿಸಿ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗ ಈವರಗೂ ಕೊಡುತ್ತಿದ್ದ 3 ಲಕ್ಷ ರೂ. ಬದಲಿಗೆ 10 ಲಕ್ಷ ಕೊಡುವುದಾಗಿ ತಿಳಿಸಿದೆ.