ಬೆಳಗಾವಿ: ಸುವರ್ಣ ಸೌಧದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ನೌಕರರನ್ನು ಎಬ್ಬಿಸುವ ಸಲುವಾಗಿ ಸರ್ಕಾರ ಪೊಲೀಸರನ್ನು ಛೂ ಬಿಟ್ಟಿತ್ತು. ಆದರೆ, ಅದಾವುದಕ್ಕೂ ನೌಕರರು ಜಗ್ಗದಿದ್ದರಿಂದ ಅವರನ್ನು ಚದುರಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ.
ಹೀಗಾಗಿ ಇಂದು ಮುಂಜಾನೆ ಟೆಂಟ್‌ನಲ್ಲಿ ಉಪವಾಸ ಕುಳಿತಿರುವವರನ್ನು ಹೊರತು ಪಡಿಸಿ ಬೇರೆ ಯಾವ ನೌಕರರನ್ನು ಟೆಂಟ್ ಒಳಗಡೆ ಬಿಟ್ಟಿಲ್ಲ. ಆದರೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಟೆಂಟ್‌ನಿಂದ ಸುಮಾರು 200 ಮೀಟರ್ ದೂರದಲ್ಲಿದ್ದ ನಿರ್ಮಾಣಹಂತದ ಪೆಟ್ರೋಲ್ ಬಂಕ್ ಒಂದರ ಬಳಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಈ ವೇಳೆ ಪೊಲೀಸರು ಅಲ್ಲಿಯೂ ನೌಕರರನ್ನು ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡದೆ ಎಬ್ಬಿಸಿದ್ದಾರೆ.
ಆದರೂ ಹಠ ಬಿಡದ ಸಾರಿಗೆ ನೌಕರರು ಸುವರ್ಣಸೌಧದಿಂದ 700-800 ಮೀಟರ್ ದೂರದ ಜಮೀನೊಂದರಲ್ಲೇ ತಮ್ಮ ಹೋರಾಟವನ್ನು ಮುಂದರುವರಿಸುತ್ತಿದ್ದಾರೆ. ಆದರೆ ಅಲ್ಲಿಗೂ ಎರಡು ಬಸ್‌ಗಳಲ್ಲಿ ಹೋಗಿರುವ ಪೊಲೀಸರು ನೌಕರರ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.
ಇನ್ನು ಪ್ರಮುಖವಾಗಿ ಸಮಾನ ವೇತನ ಮತ್ತು ಕಾನೂನು ಬಾಹಿರವಾಗಿ ವಜಾಗೊಳಿಸಿರುವ ಸಾರಿಗೆ ನೌಕರರನ್ನು ಯಾವುದೇ ಷರತ್ತುಗಳು ಇಲ್ಲದೆ ಮರು ನೇಮಕ ಮಾಡಿಕೊಳ್ಳಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 6 ನೇ ದಿನವು ಸರ್ಕಾರ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದ್ದರೂ ಶಾಂತಿಯುತವಾಗಿಯೇ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದಾರೆ.
ಈ ನಡುವೆ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿರುವ ಚಂದ್ರಶೇಖರ್ ಅವರು ಇಂದು ಬೆಳಗ್ಗೆ 5ಗಂಟೆಯಲ್ಲಿ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನು ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಅವರ ಅಧ್ಯಕ್ಷತೆಯಲ್ಲಿಯೇ ನೌಕರರು ಸುವರ್ಣಸೌಧದ ನಂ.6ರ ಟೆಂಟ್‌ನಲ್ಲೇ ಉಪವಾ ಸತ್ಯಾಗ್ರಹ ಮುಂದುವರಿಸುತ್ತಿದ್ದಾರೆ.
ಇತ್ತ ಜಮೀನಿನಲ್ಲೇ ನೌಕರರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಇದಕ್ಕೂ ಮುನ್ನ ನಿರ್ಮಾಣಹಂತದ ಪೆಟ್ರೋಲ್ ಬಂಕ್ ಬಳಿ ಹೋರಾಟ ಮಾಡಿದ್ದಾರೆ. ಅಂದರೆ ನೌಕರರು ಈವರೆಗೂ ಸರ್ಕಾರ ಮತ್ತು ನಾಲ್ಕೂ ನಿಗಮಗಳ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿದಿದ್ದಕ್ಕೆ ಬೇಸತ್ತು ಅಂತಿಮವಾಗಿ ಈ ಹೋರಾಟವನ್ನು ಕೈಗೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬಂತಹನಿರ್ಧಾರಕ್ಕೆ ಬಂದಿದ್ದಾರೆ.
ಹೀಗಾಗಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದರೆ ಖುಷಿಯಿಂದ ಸತ್ಯಾಗ್ರಹವನ್ನು ಕೈ ಬಿಡುತ್ತಾರೆ. ಇಲ್ಲದಿದ್ದರೆ ಹೋರಾಟ ಯಾವ ತಿರುವು ಪಡೆದುಕೊಳ್ಳುತ್ತದೋ ಇನ್ನು ಯಾರಿಗೂ ಗೊತ್ತಿಲ್ಲ.