ಸಾರಿಗೆ ನೌಕರರ ಸತ್ಯಾಗ್ರಹ: ಕೊರೆವ ಚಳಿಯನ್ನೂ ಲೆಕ್ಕಿಸದೆ ಸ್ಥಳದಲ್ಲೇ ತಂಗಿರುವ ಹಿರಿಯ ಜೀವಗಳು, ಮಹಿಳೆಯರು
ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಕೆಗಾಗಿ 19 .12 . 2022 ರಿಂದ ಆರಂಭಗೊಂಡ ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ ನೌಕರರು ಹಾಗೂ ಕರ್ತವ್ಯದಲ್ಲಿರುವ ನೌಕರರ ಕುಟುಂಬ ಸದಸ್ಯರು ಹಿರಿಯರು ಹಾಗೂ ಮಹಿಳೆಯರು ಪ್ರತಿಭಟನೆ ಸ್ಥಳದಲ್ಲೇ ತಂಗಿದ್ದಾರೆ.
ಕೊರೆಯುವ ಚಳಿಯನ್ನು ತಮ್ಮ ಹಾಗೂ ಕುಟುಂಬದವರ ಮೂಲಭೂತ ಹಕ್ಕಿಗಾಗಿ ರಾತ್ರಿಯಿಡಿ ಸತ್ಯಾಗ್ರಹ ಸ್ಥಳದಲ್ಲೇ ತಂಗಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಅಲ್ಲದೆ ಹೆಚ್ಚು ಕೆಲಸ ಕಡಿಮೆ ಪಗಾರ. ಇದನ್ನು ತಪ್ಪಿಸಿ ನಮಗೂ ನ್ಯಾಯಯುತ ವೇತನ ನೀಡಿ, ನಾವು ಸಾರ್ವಜನಿಕ ಸೇವಕರಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ನೌಕರರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ ನಾಡಿನ ಹಾಗೂ ದೇಶದ ಜನರನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಹೀಗಾಗಿ ಸರ್ಕಾರ ನಮಗೂ ಸುರಕ್ಷತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಕಳೆದ 2020ರ ಜನವರಿ 1ನೇ ತಾರೀಖಿನಿಂದಲೇ ಜಾರಿಗೆ ಬರುವಂತೆ ಏನು ವೇತನ ಹೆಚ್ಚಳವಾಗಬೇಕಿದೆ ಅದನ್ನು ತಡೆಯಿಡಿದಿರುವುದನ್ನು ಕೂಡಲೇ ನಿರ್ಧರಿಸಿ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನದಂತೆ ನಮಗೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ನೌಕರಿ ಮೇಲೆ ಹೋದ ತಮ್ಮ ಮಕ್ಕಳ ಪರವಾಗಿ 71 ವರ್ಷ ಮೀರಿದ ಹಲವಾರು ಹಿರಿಯ ಜೀವಗಳು ಮತ್ತು ತಮ್ಮ ಪತಿ/ಪತ್ನಿ ನೌಕರಿ ಮಾಡುತ್ತಿದ್ದಾರೆ ಅವರಿಗೆ ತೊಂದರೆ ಕೊಡಬಾರದು ಎಂದು ಕುಟುಂಬದ ಸದಸ್ಯರು ತಮ್ಮ ತಮ್ಮ ಚಿಕ್ಕಮಕ್ಕಳೊಂದಿಗೆ ಬಂದು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ಅದರಂತೆ ಉಳಿದ ನೌಕರರು ಡ್ಯೂಟಿಗೆ ಹೋದರೆ ಅವರ ಕುಟುಂಬ ಸದಸ್ಯರು ಬರಬೇಕು, ಜತೆಗೆ ವಾರದ ರಜೆ ಇರುವ ನೌಕರರು ಪಾಲ್ಗೊಳ್ಳುವ ಮೂಲಕ ನಿಮ್ಮದೇ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಇನ್ನು ಈ ಕೊರೆಯುವ ಚಳಿಯಲ್ಲಿ ಹಿರಿಯ ಜೀವಗಳಿಗಾಗಲಿ, ಮಹಿಳೆರಿಗಾಗಲಿ, ನೌಕರರಿಗಾಗಲೀ ಯಾವುದೇ ಜೀವಕ್ಕಾಗಲಿ ಆರೋಗ್ಯದಲ್ಲಿ ಹೆಚ್ಚುಕಮ್ಮಿ ಆದರೆ ಅದಕ್ಕೆಲ್ಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ನೇರ ಕಾರಣರಾಗುತ್ತಾರೆ ಎಂದು ನೌಕರರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.