ಬೆಂಗಳೂರು: ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದ್ದ ಚಾಲನಾ/ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳನ್ನು ಮರಳಿ ಮಾತೃ ಘಟಕಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.
ಈ ಸಂಬಂಧ ಈಗಾಗಲೇ ಕೆಎಸ್‌ಆರ್‌ಟಿಸಿ ಬೇರೆಬೇರೆ ವಿಭಾಗಗಳು ಮತ್ತು ಘಟಕಗಳಿಗೆ ವರ್ಗಾವಣೆಗೊಳಿಸಿದ್ದವರನ್ನು ಮಾತೃ ಘಟಕಕ್ಕೆ ವರ್ಗಾವಣೆ ಮಾಡಿ ಹಲವಾರು ನೌಕರರು ಮಾತೃ ಘಟಕದಲ್ಲೇ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದಾರೆ.
ಅದೇ ರೀತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೂಡ ಮುಷ್ಕರದ ವೇಳೆ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದ್ದ ಚಾಲನಾ/ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳನ್ನು ಮರಳಿ ಮಾತೃ ಘಟಕಗಳಿಗೆ ವರ್ಗಾವಣೆ ಮಾಡುತ್ತಿದೆ.
ಈ ಸಂಬಂಧ ಚಾಲನಾ/ ಸಂಚಾರ ಸಿಬ್ಬಂದಿಗಳನ್ನು 2021 ರ ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಘಟಕಕ್ಕೆ ನಿಯೋಜಿಸಲು ಆದೇಶಿಸಲಾಗಿದ್ದು, ಈ ಆದೇಶದಲ್ಲಿನ ಚಾಲನಾ/ಸಂಚಾರ, ಸಿಬ್ಬಂದಿಗಳು ಪ್ರಸ್ತುತ ಘಟಕದಲ್ಲಿಯೇ ಮುಂದುವರಿಯಲು ಇಚ್ಚಿಸಿ ಮನವಿ ಸಲ್ಲಿಸಿದ್ದರೆ ಅಂತಹ ಸಿಬ್ಬಂದಿಗಳನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಘಟಕದಲ್ಲಿಯೇ ಮುಂದುವರಿಸಲು ಅನುಮತಿಸಲಾಗುವುದು.
2021 ರ ಮುಷ್ಕರದ ಸಂಬಂಧ ವಿಭಾಗ ಮಟ್ಟದಲ್ಲಿ ಘಟಕ ವರ್ಗಾವಣೆ ಮಾಡಿದ್ದಲ್ಲಿ (ಮುಷ್ಕರದ ನಂತರ ಶಿಸ್ತು/ಗೈರುಹಾಜರಾತಿ/ ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತುಗೊಂಡ ನೌಕರರನ್ನು ಹೊರತುಪಡಿಸಿ) ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಘಟಕಗಳಗೆ ಅವರ ಕೋರಿಕೆ ಮೇರೆಗೆ ನಿಯೋಜಿಸಲು ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.