ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಬಹುತೇಕ ಎಲ್ಲ ಸಾರಿಗೆ ಸಂಘಟನೆಗಳ ಮುಖಂಡರು ಎಡಬಿಡಂಗಿ ಮಾಡಿದ್ದಾರೆ.
ಇಲ್ಲಿ ವೇತನ ಹೆಚ್ಚಳ ಆದರೆ ಬರಿ ನೌಕರರಿಗಷ್ಟೇ ಆಗುವುದಿಲ್ಲ, ಸಮಸ್ತ ಸಾರಿಗೆ ನಿಗಮದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೂ ಆಗುತ್ತದೆ. ಆದರೆ, ಇಲ್ಲಿ ಬಲಿಪಶುವಾಗುತ್ತಿರುವುದು ಮಾತ್ರ ಚಾಲನಾ ಸಿಬ್ಬಂದಿಗಳು ಅಷ್ಟೇ. ಇದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲ ಏಕೆಂದರೆ ಈ ನಿಮ್ಮ ಸಂಘಟನೆಗಳ ಮಹಾನ್ ನಾಯಕರು ನಿಮ್ಮನ್ನು ಬಳಸಿಕೊಂಡು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ.
ಪ್ರಮುಖವಾಗಿ ವೇತನದ ಬಗ್ಗೆ ಅಧಿಕಾರಿಗಳು ಮಾತನಾಡಬೇಕು. ಆ ಬಳಿಕ ಅಧಿಕಾರಿಗಳು ನಿಗಮಗಳಿಗೆ ಸರಿಯಾಗಿ ವೇತನ ಹೆಚ್ಚಳ ಮಾಡಿಲ್ಲ ಇದರಿಂದ ನಮ್ಮೆಲ್ಲರಿಗೂ ವರ್ಷಕ್ಕೆ ಇಷ್ಟು ಲಾಸ್ ಆಗುತ್ತದೆ ಎಂದು ನೌಕರರ ಬಳಿ ಚರ್ಚೆ ಮಾಡಬೇಕು. ಆದರೆ, ಇದು ಆಗುತ್ತಿಲ್ಲ. ಕಾರಣ ನಿಗಮಗಳಲ್ಲಿ ಅಧಿಕಾರಿಗಳಿಗೆ ಒಂದುರೀತಿಯ ವಾರ್ಷಿಕ ವೇತನ, ಚಾಲನಾ ಸಿಬ್ಬಂದಿಗಳಲ್ಲಿ ನಿರ್ವಾಹಕರಿಗೆ ಒಂದುರೀತಿ ಹಾಗೂ ಚಾಲಕರಿಗೆ ಒಂದುರೀತಿ ವಾರ್ಷಿಕ ವೇತನ ಹೆಚ್ಚಳ ಮಾಡುವ ಪದ್ಧತಿ ಇದ್ದು ಇದು ತುಂಬಾ ಅವೈಜ್ಞಾನಿಕವಾಗಿ ಆಗಿದೆ.
ಈ ಬಗ್ಗೆ ಮಾತನಾಡಬೇಕಾದ ಹಳೆಯ ಮತ್ತು ಹೊಸ ಸಂಘಟನೆಗಳ ಮುಖಂಡರು ಚಕಾರವೆತ್ತದೆ. ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ತಮ್ಮ ಅಸ್ತಿತ್ವಕ್ಕಾಗಿ ಹೋರಾಟಡುತ್ತಿದ್ದಾರೆ. ಈ ನಡೆಯನ್ನು ಮೊದಲು ಬದಿಗೆ ಸರಿಸಿ ಅಧಿಕಾರಿಗಳು ಮತ್ತು ನೌಕರರಿಗೆ ಅವರ ಹುದ್ದೆಗೆ ತಕ್ಕಂತೆ ವಾರ್ಷಿಕ ವೇತನ ಹೆಚ್ಚಳವಾಗುವ ನಿಯವನ್ನು ಜಾರಿಗೆ ತರಬೇಕು.
ಆಗ ನೌಕರರು ಮತ್ತು ಅಧಿಕಾರಿಗಳ ನಡುವೆ ಇರುವ ತಾರತಮ್ಯತೆ ದೂರಾಗುತ್ತದೆ. ಆದರೆ ಕೆಲ ಸಂಘಟನೆಗಳ ಮಹಾನ್ ನಾಯಕರಿಗೆ ಇದು ಆಗುವುದು ಬೇಡ. ಕಾರಣ, ನೌಕರರು ಮತ್ತು ಅಧಿಕಾರಿಗಳು ಒಂದಾಗಿಬಿಟ್ಟರೆ, ಹೀಗಾಗದರೆ ನಮ್ಮ ಬೇಳೆ ಬೇಯಿಸಿಕೊಳ್ಳುವುದ ಉಹೇಗೆ ಎನ್ನುವ ಲೆಕ್ಕಾಚಾರ. ಹೀಗಾಗಿ ಸಂಸ್ಥೆಯ ನೌಕರರಲ್ಲ ಸಂಘಟನೆಗಳಿಗೆ ಕಡಿವಾಣ ಬೀಳಬೇಕಿದೆ.
ಉದಾ: ಕೆಇಬಿಯಲ್ಲಿ ಅಲ್ಲಿನ ಅಧಿಕಾರಿಗಳು ಮತ್ತು ನೌಕರರ ನಡುವೆ ಬೇರೆ ಯಾವುದೇ ಸಂಘಟನೆಯ ಮುಖಂಡನಿಗೆ ಪ್ರವೇಶವಿಲ್ಲ. ಅದಕ್ಕೆ ಪ್ರಮುಖ ಕಾರಣ ವಾರ್ಷಿಕ ವೇತನ ಬಡ್ತಿ ಹುದ್ದಗೆ ತಕ್ಕಂತೆ ಹೆಚ್ಚಳವಾಗುತ್ತಾ ಹೋಗುತ್ತಿದೆ. ಇಲ್ಲಿಯ ರೀತಿ ಚಾಲನಾ ಸಿಬ್ಬಂದಿಗೆ ಕಡಿಮೆ ಅಧಿಕಾರಿಗಳಿಗೆ ಹೆಚ್ಚು ಎಂಬಂತಹ ತಾರತಮ್ಯತೆ ಇಲ್ಲ. ಇದೇ ರೀತಿ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಜಾರಿಯಾದರೆ ಈ ಎಲ್ಲ ಸಂಘಟನೆಗಳಿಗೆ ಜಾಗವೇ ಇರುವುದಿಲ್ಲ. ಆದರೆ, ಆ ರೀತಿ ಮಾಡುವುದಕ್ಕೆ ಅವಕಾಶವನ್ನು ಇವು ಕೊಡುತ್ತಿಲ್ಲ.
ಇದರಿಂದ ಅಧಿಕಾರಿಗಳು ಹೇಗಿದ್ದರೂ ನಮಗೆ ವಾರ್ಷಿಕ ವೇತನ ಬಡ್ತಿ ಬೇರೆ ಸ್ಲಾಬ್‌ನಲ್ಲೇ ಬರುತ್ತಿದೆ ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಯಾವುದೇ ಹೋರಾಟ ಮಾಡುವುದಕ್ಕೂ ಮತ್ತು ವೇತನ ಹೆಚ್ಚಳ ಇಷ್ಟೇ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹೇರುವುದಕ್ಕೂ ಮುಂದಾಗುತ್ತಿಲ್ಲ. ನೌಕರರು ಪ್ರತಿಭಟನೆ ಮಾಡಿ ಶೇ.15 ಇಲ್ಲ ಶೇ.20ರಷ್ಟೋ ಹೆಚ್ಚಳವಾದರೂ ಅದರಿಂದ ಹೆಚ್ಚಿನ ಲಾಭ ಪಡೆಯುವುದು ಅಧಿಕಾರಿಗಳೇ. ಹೀಗಾಗಿ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಬದಲಿಗೆ ಹೋರಾಟ ಮಾಡುವ ನೌಕರರನ್ನು ಗುರಿಯಾಗಿಸಿಕೊಂಡು ಅಮಾನತು, ವಜಾ ಇಲ್ಲವೇ ವರ್ಗಾವಣೆ ಅದಕ್ಕೂ ಮೀರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ಹಾಕಿಸಿ ಅಲೆಸುತ್ತಾರೆ. ಆದರೆ, ಇವರ ಹೋರಾಟದಿಂದ ನಮಗೆ ಇಷ್ಟು ಪರ್ಸೆಂಟ್ ವೇತನ ಹೆಚ್ಚಳವಾಯಿತು ಎಂದು ಎಲ್ಲಿಯೂ ಹೇಳುವುದಿಲ್ಲ. ಇದು ನೌಕರರಿಗೆ ಶಾಪವಾಗಿಯೇ ಪರಿಣಮಿಸುತ್ತಿದೆ.
ಇನ್ನು ಹೋರಾಟ ಮಾಡಿ ಮೂರು ಕಾಸಿನ ವೇತನ ಹೆಚ್ಚಳ ಮಾಡಿಸಿಕೊಂಡು ಶಿಕ್ಷೆಯನ್ನು ಕಳೆದ 40 ವರ್ಷಗಳಿಂದಲೂ ಎದುರಿಸುತ್ತಲೇ ಬಂದಿದ್ದಾರೆ, ಈ ನೌಕರರು. ಇನ್ನಾದರೂ ಇವರಿಗೆ ಒಂದು ಶಾಶ್ವತ ಪರಿಹಾರ ಸಿಗಬೇಕು ಎಂದು ಹೇಳಿಕೊಂಡು ಹೋರಾಟಕ್ಕೆ ಇಳಿದ ಸಂಘಟನೆಯಲ್ಲಿ ಇದ್ದವರು ಈಗ ಒಂದು ಮನೆ ಆರು ಬಾಗಿಲೂ ಎಂಬಂತೆ, ಒಡೆದು ಹೋಳಾಗಿ ಹೋಗಿದ್ದಾರೆ. ಇದಕ್ಕೆ ಕಾರಣ, ಕೆಲ ಕುಂತಂತ್ರಿಗಳು ಹೂಡಿದ ಹೊಡೆದು ಹಾಳುವ ನಿತಿಯೇ ಹೊರತು ಯಾವುದೇ ಒಬ್ಬ ವ್ಯಕ್ತಿ ನಡೆಯಿಂದ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಈಗಲೂ ಕಾಲ ಮಿಂಚಿಲ್ಲ ನೌಕರರಿಗೆ ಒಳ್ಳೆಯದನ್ನೇ ಬಯಸುವ ಸಂಘಟನೆಗಳೇ ಆಗಿದ್ದರೆ ನೌಕರರು ಮತ್ತು ಅಧಿಕಾರಿಗಳ ಮಧ್ಯೆ ಇರುವ ವಾರ್ಷಿಕ ವೇತನ ತಾರತಮ್ಯತೆಯನ್ನು ಮೊದಲು ಸರಿಪಡಿಸಲು ಮುಂದಾಗಿ. ಆ ಬಳಿಕ ಸರ್ಕಾರ ಮತ್ತು ಆಡಳಿತ ಮಂಡಳಿಗೆ ನೀವು ನಮಗೆ ಶೇ.20 ಇಲ್ಲ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಹೋರಾಟವನ್ನು ರೂಪಿಸಿ. ಇದು ನಿಮ್ಮಿಂದ ಸಾಧ್ಯ, ಆದರೆ ನೀವು ಮಾಡುವುದಿಲ್ಲ. ಏಕೆಂದರೆ ನಿಮಗೆ ನೌಕರರು ತಿಂಗಳಿಗೆ ಕೊಡುವ 5 ರೂ. 15 ರೂ.ಗಳಿಂದ ಲಕ್ಷಾಂತರ ರೂಪಾಯಿ ಶೇಖರಣೆ ಆಗುತ್ತಿದೆ. ಇದನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ.
ಹೀಗಾಗಿ ನೌಕರರಿಗೆ ಆಗುತ್ತಿರುವ ನಷ್ಟವನ್ನು ನಾವೇಕೆ ಲೆಕ್ಕಹಾಕಬೇಕು ಎನ್ನುವಂತೆ ನಡೆದುಕೊಳ್ಳುತ್ತಿದ್ದೀರಿ. ಕಾರಣ ನಿಮ್ಮ ಖಜಾನೆ ಮಾತ್ರ ತಿಂಗಳು ತಿಂಗಳು ಭರ್ತಿಯಾಗುತ್ತಲೇ ಇದೆಯಲ್ಲ. ಇದಕ್ಕಾಗಿಯೇ ಅಮಾನತಾದ ಇಲ್ಲ ವಜಾಗೊಂಡ ಕೆಲ ನೌಕರರಿಗೆ ಮದ್ಯಪಾನ ಮಾಡಿಸಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟ್ಟರ್ ಇಲ್ಲ ಯೂಟೂಬ್‌ನಲ್ಲಿ ಅವಾಚ್ಯ ಶಬ್ದಗಳಿಂದ ಬೇರೆಯವರನ್ನು ನಿಂದಿಸಲು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೀರಿ.
ಇದನ್ನು ಕಾಣದ ಅಮಾಯಕ ನೌಕರರು ಸತ್ಯಗೊತ್ತಿದ್ದರೂ ಏನು ಮಾಡದ ಸ್ಥಿತಿಗೆ ತಲುಪಿದ್ದಾರೆ. ಇತ್ತ ಅಧಿಕಾರಿಗಳು ಕೂಡ ಇವರಿಗೆ ಸಾಥ್ ನೀಡದಂತಹ ವಾತಾವರಣವನ್ನು ನಿಗಮಗಳಲ್ಲಿ ನೀವು ಸೃಷ್ಟಿಸಿಬಿಟ್ಟಿದ್ದು ಈಗಲೂ ಅಧಿಕಾರಿಗಳನ್ನು ನೌಕರರ ಮುಂದೆ ಬೈದು ಅವರನ್ನು ಅಧಿಕಾರಿಗಳ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮುಂದುವರಿಸಿದ್ದೀರಿ. ಇದೇ ನಿಮ್ಮ ಅಜಂಡ ಅಲ್ಲವೇ? ಇನ್ನಾದರೂ ಈರೀತಿ ನೌಕರರ ದಿಕ್ಕು ತಪ್ಪಿಸುವುದನ್ನು ಬಿಟ್ಟು ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಿ ಎಂದು ಪ್ರಜ್ಞಾವಂತ ನೌಕರರು ಆಗ್ರಹಿಸುತ್ತಿದ್ದಾರೆ.