
ಬೆಂಗಳೂರು: ಖಾಸಗಿ ಮತ್ತು ಸರ್ಕಾರಿ ಸಾರಿಗೆ ನೌಕಕರ ಸಂಘಟನೆಗಳು ಸರ್ಕಾರಕ್ಕೆ ಬಿಸಿ ತುಪ್ಪವಾಗಲಿವೆ. ನಿನ್ನೆಯಷ್ಟೇ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮಾ.23ರಂದು ಬಂದ್‌ಗೆ ಕರೆ ನೀಡಿತ್ತು. ಈ ನಡುವೆ ಇಂದು ಸರ್ಕಾರಿ ಸಾರಿಗೆ ನೌಕರರು ಕೂಡಾ ಬಂದ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಇದೀಗ ಬಂದ್ ಸುದ್ದಿಗಳೇ ಕೇಳಿ ಬರುತ್ತಿದ್ದು, ಈ ಮಧ್ಯೆ ರಾಜ್ಯ ಸರ್ಕಾರಕ್ಕೂ ಕೂಡ ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಬಂದ್ ಬಿಸಿ ತಟ್ಟಿಸಲು ಮುಂದಾಗಿದೆ.
ಇದೆಲ್ಲವನ್ನು ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ಡಬಲ್ ಶಾಕ್ ಆಗಲಿದ್ದು, ಅತ್ತ ಖಾಸಗಿ ನೌಕರರು ಮಾ.5ರಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಇಟ್ಟಿದ್ದು, ಈಡೇರಿಸದೆ ಹೋದರೆ ಕರ್ನಾಟಕ ಬಂದ್ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಇದರ ನಡುವೆ ಇಂದು ಮಾ.6ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಇತ್ತ ಸಾರಿಗೆ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಬೇಡಿಕೆ ಈಡೇರಿಸದಿದ್ದರೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಒಕ್ಕೂಟಗಳು ಬಂದ್‌ಗೆ ಕರೆ ನೀಡುತ್ತವೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿನ್ನೆಲೆ ಬಸ್ ಸಂಚಾರ ಬಂದ್ ಮಾಡಲು ಸಾರಿಗೆ ನೌಕರರು ಮುಂದಾಗುತ್ತಿದ್ದಾರೆ. ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಜತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೌಕರರಿಗೆ ಕೊಟ್ಟ ಭರವಸೆಯಂತೆ ಸರಿ ಸಮಾನ ವೇತನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದರ ಜತೆಗೆ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡಬೇಕು ಎಂದು ಒತ್ತಾಯಿಸಿದ್ದು, ಒಂದು ವೇಳೆ ಈ ಅಧಿವೇಶನದಲ್ಲಿ ಘೋಷಣೆ ಮಾಡದಿದ್ದರೆ ಇದೇ ಮಾ.25ರಂದು ಉಗ್ರ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ನಾಳೆ ಬಜೆಟ್‌ನಲ್ಲಿ ಘೋಷಣೆ ಮಾಡದಿದ್ದರೆ ಮಧ್ಯೆ ಮಧ್ಯೆಯೇ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಇದಾದ ಬಳಿಕ ಮಾ.25ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.