ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 4 ಸಾವಿರ ಬಸ್‌ಗಳನ್ನು ಖರೀದಿಸಲು ಮುಂದಾಗಿರುವ ರಾಜ್ಯ ಸರ್ಕಾರ, ನಷ್ಟವನ್ನ ಉಸರಿದೂಗಿಸುವ ನಿಟ್ಟಿನಲ್ಲಿ ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.
ಅದೇನು ಎಂದರೆ ಸರ್ಕಾರ ನಿಗಮಗಳಲ್ಲಿ ಆಗುತ್ತಿರುವ ನಿರಂತರ ನಷ್ಟವನ್ನು ತಪ್ಪಿಸಲು ನಾಲ್ಕೂ ನಿಗಮಗಳನ್ನು ವಿಲೀನಗೊಳಿಸಲು ಸಜ್ಜಾಗಿದೆ.
ಹೌದು! ಈ ಬಗ್ಗೆ ಇಂದು (ಸೋಮವಾರ) ವಿಧಾನನೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ದಶಕಗಳ ಕಾಲದಿಂದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸಲು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿಕಾರಿ ಶ್ರೀನಿವಾಸಮೂರ್ತಿ ಸಮಿತಿ ಶಿಫಾರಸು ಮಾಡಿದೆ. ಅದರಂತೆ ಅತೀ ಶೀಘ್ರದಲ್ಲೇ ನಾಲ್ಕೂ ನಿಗಮಗಳನ್ನು ಒಂದುಮಾಡಲಾಗುವುದು ಎಂದು ಹೇಳಿದರು.
ನಾಲ್ಕು ನಿಗಮಗಳು ಅಸ್ತಿತ್ವ ದಲ್ಲಿರುವುದರಿಂದ ಆಡಳಿತಾತ್ಮಕ ಹೊರೆ ಕೂಡ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಅಸ್ತಿತ್ವ ದಲ್ಲಿರುವಂತೆ ಮಾಡಿದರೆ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟ ತಪ್ಪುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇವತ್ತು ನಾಲ್ಕು ಪ್ರತ್ಯೇಕ ನಿಗಮಗಳಿರುವುದರಿಂದ ಎಲ್ಲ ನಿಗಮಗಳು ತಮ್ಮ ತಮ್ಮ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುತ್ತವೆ. ಹೀಗಾಗಿ ಬಹುತೇಕ ಸಂದರ್ಭಗಳಲ್ಲಿ ಬಸ್‌ಗಳು ಕಡಿಮೆ ಪ್ರಯಾಣಿಕರೊಂದಿಗೆ ಸಂಚರಿಸುವಂತಾಗಿ ನಷ್ಟದ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಎಲ್ಲ ನಿಗಮಗಳು ವಿಲೀನವಾದಾಗ ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬಹುದು, ಕಡಿಮೆ ಪ್ರಯಾಣಿಕರಿದ್ದರೆ ಅಂತಹ ಬಸ್‌ಗಳಲ್ಲಿದ್ದವರಿಗೆ ಅದೇ ಮಾರ್ಗದಲ್ಲಿರುವ ಬೇರೆ ಬಸ್‌ಗಳಲ್ಲಿ ಸೀಟು ಕಲ್ಪಿಸಬಹುದು.
ಇನ್ನು ಕೋವಿಡ್ ಕಾಲದಲ್ಲಿ ಸಾರಿಗೆ ಸಂಸ್ಥೆ ಆದಾಯವಿಲ್ಲದೆ ಬಳಲಿತ್ತು . ಆದರೆ ಸಾರಿಗೆ ನೌಕರರ ವೇತನ ನೀಡುವ ಸಲುವಾಗಿ ರಾಜ್ಯ ಸರ್ಕಾರ 6000 ಕೋಟಿ ರೂ.ಗಳನ್ನು ಬಿಡುಗಡೆಮಾಡಿ ಅನುಕೂಲ ಒದಗಿಸಿತು. ಈಗ ಪರಿಸ್ಥಿತಿ ಸುಧಾರಿಸಿದ್ದರೂ ಸಾರಿಗೆ ಸಂಸ್ಥೆಯ ನಷ್ಟ ಮಾತ್ರ ತಪ್ಪಿಲ್ಲ . ಹೀಗಾಗಿ ಶ್ರೀನಿವಾಸಮೂರ್ತಿಯವರ ಶಿಫಾರಸಿನಂತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳನ್ನು ವಿಲೀನಗೊಳಿಸಲು ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ ಎಂದು ಹೇಳಿದರು.
ಇನ್ನು ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೂ ಸೇರಿದಂತೆ ನಾಲ್ಕು ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು. ಅದಕ್ಕೆ ಈಗಿರುವ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರ ಹೆಚ್ಚುವರಿ ಬಸ್‌ಗಳ ಅಗತ್ಯ ವಿದೆ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಬಿಎಂಟಿಸಿಗೆ ಒಂದೂವರೆ ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ಒಂಬತ್ತರಿಂದ ಹತ್ತು ಲಕ್ಷ ಕಿಲೋಮೀಟರ್ ವರೆಗೆ ಸಂಚರಿಸಿದ ಬಸ್‌ಗಳಿದ್ದು, ಅವುಗಳನ್ನು ತಲಾ ಮೂರೂವರೆ ಲಕ್ಷ ರೂ. ಗಳ ವೆಚ್ಚ ದಲ್ಲಿ ಪುನರ್ ಸಜ್ಜು ಗೊಳಿಸಲು ತೀರ್ಮಾನಿಸಲಾಗಿದೆ. ಟೈಯರ್, ಇಂಜಿನ್‌ಗಳನ್ನು ಬದಲಿಸಿ ಹೊಸತಾಗಿ ಅಳವಡಿಸುವ ಮೂಲಕ ಪುನರ್ ನವೀಕರಣಗೊಂಡ ಬಸ್‌ಗಳನ್ನು ಪ್ರಾಯೋಗಿಕವಾಗಿ ನಿಗಮಗಳಿಗೆ ಒದಗಿಸಲಾಗಿದ್ದು, ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.