NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ – DC ಮೌನ

DC ಆಶೋಕ್‌ ಕುಮಾರ್‌
ವಿಜಯಪಥ ಸಮಗ್ರ ಸುದ್ದಿ

ಗುಂಡ್ಲುಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಮರಾಜನಗರ ವಿಭಾಗದ ಗುಂಡ್ಲುಪೇಟೆ ಘಟಕದಲ್ಲಿ ಘಟಕ ವ್ಯವಸ್ಥಾಪಕರು ಮತ್ತು ಎಟಿಎಸ್‌ ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟಕದ ವ್ಯವಸ್ಥಾಪಕರು ಮತ್ತು ಎಟಿಎಸ್‌ ನೌಕರರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡುವ ವಿಷಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ ಎಂದು ಘಟಕದ ನೌಕರರು ಆರೋಪಿಸುತ್ತಿದ್ದಾರೆ. ನಮಗೆ ಸರಿಯಾಗಿ ಡ್ಯೂಟಿ ಕೊಡುವುದಿಲ್ಲ. ಬೆಳಗ್ಗೆ 6 ಗಂಟೆಗೆ ಬನ್ನಿ ಎಂದು ಹೇಳುತ್ತಾರೆ. 6ಗಂಟೆಗೆ ಬಂದರೆ ರೂಟ್‌ಗಳಿಗೆ ಈಗಾಗಲೇ ಬಸ್‌ಗಳನ್ನು ಕಳುಹಿಸಾಗಿದೆ ಕಾಯಿರಿ ಎಂದು ಹೇಳುತ್ತಾರೆ.

ಸಂಸ್ಥೆಯಲ್ಲಿ ಕೊಡುತ್ತಿರುವ ವೇತನದಿಂದ ಮನೆ ಬಾಡಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ವಯಸ್ಸಾದ ಅಪ್ಪ-ಅಮ್ಮನ ಆರೋಗ್ಯಕ್ಕೆ ಹಾಗೂ ಸಂಸಾರದ ನಿತ್ಯ ಖರ್ಚಿಗೆ ಸಾಕಾಗುತ್ತಿಲ್ಲ. ಹೀಗಾಗಿ ನಾವು ಮನೆ ಬಾಡಿಗೆ ಕಟ್ಟುವುದನ್ನಾದರೂ ನಿಯಂತ್ರಿಸೋಣ ಎಂದು 60-70 ಕಿಮೀ ದೂರದಲ್ಲಿರುವ ನಮ್ಮ ಮನೆಗಳಿಂದಲೇ ಓಡಾಡುತ್ತಿದ್ದೇವೆ.

ಈ ನಡುವೆ ನಮಗೆ ಯಾವುದಾದರೂ ಒಂದು ರೂಟ್‌ ಕೊಟ್ಟರೆ ನಾವು ಸರಿಯಾದ ಸಮಯಕ್ಕೆ ಬಂದು ಡ್ಯೂಟಿಗೆ ಹೋಗಲು ಅನುಕೂಲವಾಗುತ್ತದೆ. ಆದರೆ ಘಟಕದ ಅಧಿಕಾರಿಗಳು ದಿನಕ್ಕೊಂದು ರೂಟ್‌ಗೆ ಕಳುಹಿಸುತ್ತಾರೆ. ಅಲ್ಲದೆ ನೀವು ಎಲ್ಲಾದರೂ ಹೋಗಿ ನಮಗೆ ಕಿಲೋ ಮೀಟರ್‌ (300-360 ಕಿಮೀ) ಆಗಬೇಕು. ಜತೆಗೆ ಆದಾಯವನ್ನು ತರಬೇಕು ಎಂದು ತಾಕೀತು ಮಾಡುತ್ತಿದ್ದಾರೆ.

ಇನ್ನು ಇತ್ತ ಮೂರು ನಾಲ್ಕು ನಿದಿನಗಳು ಡಿಪೋಗೆ ಬರುವುದೇ ಬೇಡ ನೀವು ರೂಟ್‌ ಮೇಲೆ ಇರಬೇಕು ಎಂದು ಆದೇಶ ಮಾಡುತ್ತಿದ್ದಾರೆ. ಸರಿಯಾದ ಒಂದು ರೂಟನ್ನು ನಮಗೆ ಕೊಡುತ್ತಿಲ್ಲ. ಅಧಿಕಾರಿಗಳು ಹೇಳಿದ ಮಾರ್ಗದಲ್ಲೇ ನಾವು ಬಸ್‌ ಓಡಿಸಬೇಕು, ಇದರಿಂದ ನಿತ್ಯ ಸಂಚರಿಸಬೇಕಾದ ಮಾರ್ಗಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲದೆ ಶಾಲಾ ಕಾಲೇಜುಗಳೀಗೆ ಹೋಗುವ ಮಕ್ಕಳಿಗೂ ಸಮಸ್ಯೆ ಆಗುತ್ತಿದೆ.

ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ನಮಗೆ ಸರಿಯಾದ ರೂಟ್‌ಕೊಡಿ ಜತೆಗೆ 3-4 ದಿನ ರೂಟ್‌ ಮೇಲೆ ಇರುವುದಕ್ಕೆ ಆಗುವುದಿಲ್ಲ. ಕಾರಣ ನಿತ್ಯಕರ್ಮಗಳನ್ನು ಮಾಡಿಕೊಳ್ಳುವುದಕ್ಕೆ ಮತ್ತು ರಾತ್ರಿ ವೇಳೆ ಮಲಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ ತಾವು ನಮಗೆ ಒಂದು ದಿಗದಿತ ರೂಟ್‌ ಕೊಡಿ ಎಂದು ಮನವಿ ಮಾಡಿದರೂ ಡಿಸಿ ಅಶೋಕ್‌ ಕುಮಾರ್‌ ಅವರು ಕೂಡ ಸ್ಪಂದಿಸುತ್ತಿಲ್ಲ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಗುಂಡ್ಲುಪೇಟೆ ಘಟಕದಲ್ಲಿ ನಿತ್ಯ ನೌಕರರಿಗೆ ತೊಂದರೆ ಕೊಡುವುದನ್ನೇ ಕಾಯಕಮಾಡಿಕೊಂಡಿದ್ದಾರೆ ಅಧಿಕಾರಿಗಳೂ. ರೂಟ್‌ ಮೇಲೆ ಹೋಗುವುದಕ್ಕೂ ಲಂಚಕೊಡಬೇಕು, ನಮ್ಮ ರಜೆ ಹಾಕಿದರೂ ಲಂಚಕೊಡಬೇಕು, ಅರ್ಧಗಂಟೆ ತಡವಾಗಿ ಬಂದರೂ ಲಂಚಕೊಡಬೇಕು, ಬಸ್‌ ಸರಿಯಾಗಿಲ್ಲ ಸರಿ ಮಾಡಿಕೊಡಿ ಎಂದರೆ ಲಂಚ, ಹೀಗೆ ಪ್ರತಿಯೊಂದಕ್ಕೂ ಚಾಲನಾ ಸಿಬ್ಬಂದಿ ಲಂಚಕೊಡಬೇಕಾದ ಪರಿಸ್ಥಿತಿ ಇದೆ. ಇದನ್ನು ಕೇಳಬೇಕಾದ ಮೇಲಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನು ಈ ಹಿಂದೆ ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ ಚಾಲನಾ ಸಿಬ್ಬಂದಿಗಳಿಗೇ ಕಿರುಕುಳ ಕೊಡುತ್ತಿರುವುದರಿಂದ ಭಾರಿ ನೊಂದಿದ್ದ ನೌಕರರ ಕುಟುಂಬಗಳು ಸಾಮೂಹಿಕವಾಗಿ ಜೀವ ಕಳೆದುಕೊಳ್ಳುವುಕ್ಕೆ ದಯಾಮರಣ ಕೋರಿ ರಾಜ್ಯಪಾಲರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರಿಗೆ ಪತ್ರಬರೆದಿದ್ದರು. ಆ ವೇಳೆ ನಿಗಮದ ಅಧಿಕಾರಿಗಳು ಸ್ವಲ್ಪ ಮೃದುತ್ವ ತಳೆದಿದ್ದರು. ಆದರೆ ಮತ್ತೆ ಹಳೇ ಚಾಳಿಯನ್ನೇ ಮುಂದುವರಿಸುತ್ತಿದ್ದರು, ಇದರಿಂದ ನೌಕರರು ಮತ್ತೆ ಮತ್ತೆ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.

ಇದು ಸಾಲದು ಎಂಬಂತೆ ಮುಷ್ಕರದ ಬಳಿಕ ಕರ್ತವ್ಯಕ್ಕೆ ಹಾಜರಾಗಿರುವ ಹಲವು ನೌಕರರಿಗೆ ಈವರೆಗೂ ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ. ಜತೆಗೆ ತಮಗೆ ಇಷ್ಟ ಬಂದಂತೆ ಕೆಲ ಡಿಪೋಗಳ ವ್ಯವಸ್ಥಾಪಕರು ನಡೆದುಕೊಳ್ಳುತ್ತಿದ್ದು, ನೌಕರರಿಗೆ ಇನ್ನಿಲ್ಲದ ಕಿರುಕುಳಗಳನ್ನು ನೀಡುತ್ತದ್ದಾರೆ. ಇಷ್ಟಾದರೂ ಸಾರಿಗೆ ಸಚಿವರಾಗಲಿ ಅಥವಾ ಉನ್ನತ ಅಧಿಕಾರಿಗಳಾಗಲಿ ನೌಕರರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದರಿಂದ ಬಹುತೇಕ ಡಿಪೋಗಳಲ್ಲಿ ನೌಕರರಿಗೆ 2020ರ ಏಪ್ರಿಲ್‌6ರ ಹಿಂದೆ ಇದ್ದ ಕಿರುಕುಳಕ್ಕಿಂತಲೂ ಈಗ ಹೆಚ್ಚಾಗಿದ್ದು, ನೌಕರರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲ ಡಿಪೋಗಳಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ನೌಕರರು ಮನನೊಂದು ತಮ್ಮ ವೃತ್ತಿಗೆ ರಾಜೀನಾಮೆ ಕೊಡುವುದಕ್ಕೂ ಮುಂದಾಗಿದ್ದಾರೆ.

ಈಗಾಗಲೇ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್‌ ಮಾಡಿದ್ದು, ಇಲ್ಲಿ ಮಹಿಳೆಯರು ಟಿಕೆಟ್‌ ತೆಗೆದುಕೊಂಡಿಲ್ಲ ಎಂದರೂ ಮತ್ತು ಟಿಕೆಟ್‌ ತೆಗೆದುಕೊಂಡ ನಿಲ್ದಾಣ ಬಿಟ್ಟು ಹಿಂದಿನ ನಿಲ್ದಾಣದಲ್ಲೇ ಇಳಿದು ಹೋದರೂ ಕಾರಣ ಕೇಳಿ ನೌಕರರನ್ನು ಅಮಾನತು ಮಾಡಲಾಗುತ್ತಿದೆ. ಇಲ್ಲಿ ಯಾರೋ ಮಾಡಿದ ತಪ್ಪಿಗೆ ನೌಕರರನ್ನು ಬಲಿಪಶು ಮಾಡಲಾಗುತ್ತಿದೆ. ಇದರಿಂದಲೂ ನೌಕರರ ಕೊರತೆ ನಿಗಮದಲ್ಲಿ ಉದ್ಭವಿಸಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಇರುವ ನೌಕರರ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಒತ್ತಡದಿಂದ ನೌಕರರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಕೆಲವರು ಹೃದಯಾಘಾತಕ್ಕೂ ಒಳಗಾಗುತ್ತಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ