- ಸರಿ ಸಮಾನ ವೇತನ ಘೋಷಣೆ ಮಾಡುವರೆ ಮುಖ್ಯಮಂತ್ರಿ ಸಿದ್ದರಾಮಯ್ಯ?
- ಇಲ್ಲ ಅಗ್ರಿಮೆಂಟ್ ಮೂಲಕವೇ ವೇತನ ಪರಿಷ್ಕರಣೆ ಅಸ್ತು ಎನ್ನುವರೆ?
- ನೌಕರರ ಚಿತ್ತ ಸಿಎಂ ಸಭೆಯತ್ತ
ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳ ಪ್ರಮುಖವಾಗಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಇಂದು ಸಂಜೆ ಮುಖ್ಯಮಂತ್ರಿಗಳ ಗೃಹ “ಕಾವೇರಿ”ಯಲ್ಲಿ ಹೈ ವೋಲ್ಟೆಜ್ ಸಭೆ ಸಿಎಂ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
ಹೀಗಾಗಿ ಇಂದು ಸಂಜೆ 5 ಗಂಟೆಗೆ ವೇತನ ಪರಿಷ್ಕರಣೆಯನ್ನು ಒಪ್ಪಂದದ ಮೂಲಕವೇ ಮಾಡಬೇಕು ಎಂದು ಹೋರಾಡುತ್ತಿರುವ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಿಎಂ ಈ ಹೈ ವೋಲ್ಟೆಜ್ ಸಭೆ ನಡೆಸಲಿದ್ದಾರೆ. ಬಳಿಕ ಅಂದರೆ ಸಂಜೆ 5.30ಕ್ಕೆ ನಮಗೆ ಈ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಸಂಬಂಧ ಬೀದಿಗಿಳಿದು ಹೋರಾಟ ಮಾಡುವುದು ಬೇಡ, ಹೀಗಾಗಿ ವೇತನ ಆಯೋಗ ಮಾದರಿಯಲ್ಲಿ ಸರ್ಕಾರಿ ನೌಕರರಂತೆ ನಮಗೂ ಹುದ್ದೆಗೆ ತಕ್ಕ ಸರಿ ಸಮಾನ ವೇತನ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿರುವ ನೌಕರರ ಒಕ್ಕೂಟದೊಂದಿಗೆ ಸಭೆ ನಡೆಸಲಿದ್ದಾರೆ.
ಇನ್ನು ನೌಕರರ ಒಕ್ಕೂಟ ಈ ಸಭೆಯಲ್ಲಿ ಪ್ರಮುಖವಾಗಿ ಸರಿ ಸಮಾನ ವೇತನವನ್ನು ಅದೂಕೂಡ ನೀವು ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಮಾಡಿಕೊಡಬೇಕು ಎಂಬ ಬೇಡಿಕೆಯನ್ನಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಂಡಿಸಲಿದೆ. ಇದನ್ನು ಬಿಟ್ಟು ನಮಗೆ ಒಪ್ಪಂದ ಅದು-ಇದು ಎಂಬ ಗೊಂದಲ ಇಲ್ಲ ಎಂದು ಸ್ಪಷ್ಟವಾಗಿ ಸಭೆಯಲ್ಲಿ ಗಮನ ಸೆಳೆಯಲಿದೆ.
ಸರ್ಕಾರ ಕೂಡ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವ ನಿಟ್ಟಿನಲ್ಲಿ ಆಲೋಚನೆ ಮಾಡಿದ್ದು, ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಪದಾಧಿಕಾರಿಗಳು ಕೂಡ ನಾವು ಕೊಟ್ಟ ಭರವಸೆಯನ್ನು ಸಾರಿಗೆ ನೌಕರರಿಗೆ ಈಡೇರಿಸಬೇಕಿದೆ ಎಂದು ಸಿಎಂ ಅವರ ಗಮನ ಸೆಳೆದಿದ್ದಾರೆ. ಅಲ್ಲದೆ ಈ ಬಗ್ಗೆ ಹಲವಾರು ಸಮಾರಂಭಗಳಲ್ಲೂ ಸಾರಿಗೆ ಸಚಿವರು ಹೇಳಿದ್ದಾರೆ.
ಇನ್ನು ಸಾರಿಗೆಯ 4 ನಿಗಮಗಳ ಬಹುತೇಕ ಎಲ್ಲ ಅಧಿಕಾರಿಗಳು/ ನೌಕರರ ಬೇಡಿಕೆ ಕೂಡ ಇದೇ ಆಗಿದೆ. ಅಲ್ಲದೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಜತೆಗೆ ಅಧಿಕಾರಿಗಳ ಸಂಘಟನೆಗಳು ಹಾಗೂ ಲೆಕ್ಕಪತ್ರ ಹಾಗೂ ಸಿಬ್ಬಂದಿ ಮೇಲ್ವಿಚಾರಕ ಮತ್ತು ಅಧೀಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹೀಗೆ ಬಹುತೇಕ ಎಲ್ಲ ನೌಕರರೂ ಕೂಡ ಸರಿ ಸಮಾನ ವೇತನ ಮಾಡಬೇಕು ಎಂಬ ಒತ್ತಾಯವನ್ನು ಕಳೆದ 4ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ.
ಹೀಗಾಗಿ ಸರ್ಕಾರದ ಒಲವು ಕೂಡ ನೌಕರರ ಮನಸ್ಸಿನಲ್ಲಿ ಇರುವುದನ್ನೇ ಮಾಡಬೇಕು ಎಂದು ಇದ್ದು, ಅದನ್ನು ಸಿಎಂ ಘೋಷಣೆ ಮಾಡುವ ಮೂಲಕ ಜಾರಿಗೊಳಿಸುವುದೊಂದಿಗೆ ಬಹುತೇಕ ಉಳಿದಿರುವ ವಿಷಯವಾಗಿದೆ. ಇನ್ನು ಇಂದಿನ ಸಭೆಯ ಬಳಿಕ ಸರಿ ಸಮಾನ ವೇತನ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸಮಸ್ತ ಸಾರಿಗೆ ನೌಕರರು ಎದುರು ನೋಡುತ್ತಿದ್ದಾರೆ.

Related
