ಬೆಳಗಾವಿ: ನಮ್ಮ ನಡೆ ಬೆಳಗಾವಿ ಕಡೆ.. ಸಾರಿಗೆ ನೌಕರರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಾನು ಹೋಗುತ್ತಿದ್ದೇನೆ.. ನೀವು ಕೂಡ ಬಂದು ಭಾಗವಹಿಸಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮಾಡೋಣ ಬನ್ನಿ ಎಂದು ನೌಕರರು ಸ್ವಯಂ ಪ್ರೇರಿತರಾಗಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ.
ಹೌದು! ಕಳೆದ ಇದೇ ಡಿ.19ರಿಂದ ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹದಲ್ಲಿ ಈ ಹಿಂದೆ ಒಡೆದು ಹೋಗಿದ್ದ ಮನಸ್ಸುಗಳು ಮತ್ತೆ ಒಂದಾಗಿ ಹೋರಾಟಕ್ಕೆ ದುಮುಕಿವೆ.
ಇನ್ನು ನಾನು ಕೂಟದ ಪರ, ನಾನು ಸಂಘದ ಪರ, ನಾನು ಇತರ ಸಂಘಟನೆಯ ಪರ ಎಂದು ಬೇರೆ ಬೇರೆಯಾಗಿದ್ದ ನೌಕರರು ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಒಟ್ಟಿಗೆ ಹೋರಾಟ ಮಾಡುತ್ತಿದ್ದಾರೆ. ಈ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ.
ಹೀಗಾಗಿ ಇದು ಸಾರಿಗೆ ನೌಕರರ ಒಗ್ಗಟ್ಟನ್ನು ತೋರಿಸುತ್ತಿದೆ. ಅಲ್ಲದೆ ನಾವು ಯಾವುದೇ ಸಂಘಟನೆಯ ಸದಸ್ಯರಾಗಿದ್ದರೂ ಕೂಡ ಇಲ್ಲಿ ನಾವೆಲ್ಲ ಸಮಾನ ಮನಸ್ಕರು. ಹೀಗಾಗಿ ಸಮಾನ ಮನಸ್ಕರ ವೇದಿಕೆ ಕರೆಕೊಟ್ಟು ಕಳೆದ 5ದಿನದಿಂದ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುತ್ತಿದ್ದಾರೆ.
ಇನ್ನು ಉಳಿದ ನೌಕರರೂ ಕೂಡ ತಮ್ಮ ಕುಟುಂಬ ಸಮೇತ ಬಂದು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬೆಂಬಲ ನೀಡಬೇಕು ಎಂದು ನೌಕರರೇ ನೌಕರರಿಗೆ ಇದೇ ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡುತ್ತಿದ್ದಾರೆ.
ಇನ್ನು 5ನೇ ದಿನವಾದ (ಡಿ.23) ಇಂದೂ ಕೂಡ ಉಪವಾಸ ಸತ್ಯಾಗ್ರಹ ಮುಂದುವರಿದಿದ್ದು, ಈಗಾಗಲೇ ಸಾವಿರಾರು ನೌಕರರು ಮತ್ತು ಅವರ ಕುಟುಂಬದವರು ಜತೆಗೆ ಸಾರ್ವಜನಿಕರು ಕೂಡ ನೌಕರರ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಸಮಾನ ಮನಸ್ಕರ ವೇದಿಕೆಯಿಂದ ನಡೆಯುತ್ತಿರುವ ಈ ಹೋರಾಟಕ್ಕೆ ನಿಷ್ಠಾವಂತ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದು, ಬಾಹ್ಯ ಬೆಂಬಲವನ್ನು ಸೂಚಿಸಿದ್ದಾರೆ. ಅಲ್ಲದೆ ಹೋರಾಟ ನಿರತ ನೌಕರರ ಬೇಡಿಕೆ ಈಡೇರಲೆ ಬೇಕು ಎಂದು ಪರೋಕ್ಷವಾಗಿ ಸರ್ಕಾರಕ್ಕೂ ಬಿಸಿ ಮುಟ್ಟಿಸಲು ಒಂದು ಕಡೆ ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.
ಒಟ್ಟಾರೆ ಸಾರಿಗೆ ನೌಕರರ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನೌಕರರ ಹೋರಾಟವನ್ನು ಸಂಘಟನೆಯ ಹೆಸರಿನೀಂದ ಆಚೆ ಉಳಿದುಕೋಡೆ ಬೆಂಬಲಿಸುತ್ತಿದ್ದು, ಮತ್ತೆ ಮತ್ತೆ ಹೋರಾಟ ಮಾಡುವ ಮೂಲಕ ವಜಾ, ವರ್ಗಾವಣೆ ಅಮಾನತಿನಂತಹ ಶಿಕ್ಷೆಗಳಿಗೆ ಒಳಗಾಗುವುದರಿಂದ ಮುಕ್ತಿ ಹೊಂದಬೇಕು ಎಂಬುದಕ್ಕೆ ಒತ್ತುಕೊಟ್ಟಿದ್ದಾರೆ.
ಹೀಗಾಗಿ ಬೆಳಗಾವಿಯ ಸುರ್ವಣ ಸೌಧದ ಮುಂದೆ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಾರಿಗೆ ಸಮಸ್ತ (ಒಂದೆರಡು ಸಂಘಟನೆಗಳನ್ನು ಹೊರತುಪಡಿಸಿ) ನೌಕರರ ಸಂಘಟನೆಗಳು ಮತ್ತು ಸಮಸ್ತ ನೌಕರರು, ಬಹುತೇಕ ಎಲ್ಲ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದು, ರಾಜ್ಯದ ನಾನಾ ಮೂಲೆಗಳಿಂದ ಬೆಳಗಾವಿಗೆ ಬಂದು ಸೇರುತಿದ್ದಾರೆ.