ಬೆಂಗಳೂರು: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೆ ತರುವ ಮುನ್ನವೇ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದೀರಿ. ಅಲ್ಲದೆ ಸುಮಾರು 39ಸಾವಿರ ಕೋಟಿ ರೂ.ನಷ್ಟದಲ್ಲಿರುವ ಕೆಪಿಟಿಸಿಎಲ್ ನೌಕರರಿಗೆ ಶೇ.20ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿದ್ದೀರಿ. ಆದರೆ, ಸಾರಿಗೆ ನೌಕರರಿಗೆ ಮಾತ್ರ ಶೆ.14ರಷ್ಟು ವೇತನ ಹೆಚ್ಚಳ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಹೀಗಾಗಿ ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಾರಿಗೆ ನೌಕರರ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ.
ಸಾರಿಗೆ ನೌಕರರ ವೇತನ ಸಂಬಂಧ ಸಾರಿಗೆ ನಿಗಮಗಳ ಎಂಡಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಕರೆದಿದ್ದ ಸಭೆಯಲ್ಲಿ ಚೌಕಾಸಿ ವೇತನ ಒಪ್ಪಂದ ಮಾಡುವುದಕ್ಕೆ ಮುಂದಾದ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ನಾವು ನೀವು ಕೊಡಲು ಹೊರಟಿರುವ ಶೇ.14ರಷ್ಟು ವೇತನ ಹೆಚ್ಚಳವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಮಾ.15ರ ಸಂಜೆ 5.30ಕ್ಕೆ ಆರಂಭವಾದ ಸಭೆ ಸುಮಾರು 4 ಗಂಟೆಗಳು ನಡೆಯಿತು. ಆದರೆ, ನೀ ಕೊಡೆ ನಾ ಬಿಡೆ ಎಂಬಂತೆ ಭಾರಿ ಕುತೂಹಲಕಾರಿಯಾಗಿ ಚರ್ಚೆ ನಡೆದಿದ್ದು, ಆ ಚರ್ಚೆಯಲ್ಲಿ ಸರ್ಕಾರ ಕೇವಲ 50ಪೈಸೆ 50ಪೈಸೆ ಹೆಚ್ಚಿಸುತ್ತಲೇ ಚೌಕಾಸಿ ಮಾಡಿಕೊಂಡು ಸಭೆಯು ಅಂತಿಮ ಘಟ್ಟಕ್ಕೆ ಬಂದಾಗ ಶೇ.14ರಷ್ಟು ವೇತನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದೆ.
ಆದರೆ, ಅದನ್ನು ಒಪ್ಪದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮೂಲ ವೇತನದ ಜತೆಗೆ ಬಿಡಿಎ ಮರ್ಜ್ ಮಾಡಿ ಆ ಬಳಿಕ ಶೇ. 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದರು. ಅದನ್ನು ಒಪ್ಪುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಸುಮಾರು ನಾಲ್ಕು ಗಂಟೆಗಳು ನಡೆದ ಸಭೆ ವಿಫಲವಾಯಿತು.
ಹೀಗಾಗಿ ನಮ್ಮ ಬೇಡಿಕೆ ಈಡೇರದಿದ್ದರೆ ನಾವು ಮಾ.21ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಶತಸಿದ್ಧ ಎಂದು ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿ ಸಭೆಯಿಂದ ಹೊರ ಬಂದಿದೆ.