ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರು ವೇತನ ಕೊಟ್ಟಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರ ಪೈಕಿ 35 ಮಂದಿಯನ್ನು ಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಖಾಸಗಿ ಸಂಸ್ಥೆಯೊಂದು ಒಪ್ಪಂದದ ಪ್ರಕಾರ ನಿಗದಿತ ವೇತನವನ್ನು ಪಾವತಿಸದೇ ಉಂಡೆ ನಾಮ ಹಾಕಿದ್ದು, ಇದರಿಂದ ನಖಾ ಶಿಖಾಂತ ಆಕ್ರೋಶಗೊಂಡಿರುವ ಗುತ್ತಿಗೆ ಆಧಾರಿತ ಚಾಲಕರು ಇಂದು ಬೆಳಗ್ಗೆ ದಿಢೀರ್ ಆಗಿ ಪ್ರತಿಭಟನೆ ಮಾಡಿದ್ದಾರೆ.
ಪರಿಣಾಮ ಮಡಿಕೇರಿ ಡಿಪೋ ದಲ್ಲಿನ ಕೆಲವು ಬಸ್‌ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ಮಡಿಕೇರಿ ಡಿಪೋದಲ್ಲಿ ಕೆಲವು ಮಂದಿ ಚಾಲಕರನ್ನು ಎರಡು ಪ್ರತ್ಯೇಕ ಖಾಸಗಿ ಸಂಸ್ಥೆಗಳು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿವೆ.
ಆ ಗುತ್ತಿಗೆ ಸಂಸ್ಥೆಗಳ ಪೈಕಿ ಕಳೆದ ಒಂದು ತಿಂಗಳ ಹಿಂದೆ ಗುತ್ತಿಗೆಯ ಹೊಣೆ ವಹಿಸಿಕೊಂಡಿದ್ದ ಪೂಜಯ್ಯ ಸೆಕ್ಯೂರಿಟಿ ಏಜೆನ್ಸಿ ಕರಾರಿನ ಪ್ರಕಾರ ತಿಂಗಳಿಗೆ 25000 ರೂ. ವೇತನದಲ್ಲಿ ಪಿಎಫ್ ಹಣ 3000 ರೂ. ಕಳೆದು ಉಳಿಕೆ 23000 ರೂ.ಗಳನ್ನು ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ಪಾವತಿ ಮಾಡಬೇಕು.
ಆದರೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಿಲ್ಲ ಬದಲಿಗೆ ನಿನ್ನೆ ಅಂದರೆ ಸೆ.13ರಂದು ಕೇವಲ 13000 ರೂಪಾಯಿಯನ್ನು ಪಾವತಿ ಮಾಡಿದೆ. ಇದರಿಂದ ಏನು ಮಾಡಲು ಸಾಧ್ಯ ಎಂದು ಆಕ್ರೋಶ ಹೊರಹಾಕಿರುವ ನೌಕರರು ಕೂಡಲೇ ಎಲ್ಲ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ರೊಚ್ಚಿಗೆದ್ದಿರುವ ಈ ಗುತ್ತಿಗೆ ಸಂಸ್ಥೆಯ ಅಧೀನದಲ್ಲಿರುವ ಚಾಲಕರು ಇಂದು ಬೆಳಗ್ಗೆ ಮಡಿಕೇರಿ ಡಿಪೋ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದಾರೆ. ನಿಗದಿಪಡಿಸಿರುವ ವೇತನವನ್ನು ನೀಡದೆ ಪಂಗನಾಮ ಹಾಕಿರುವ ಗುತ್ತಿಗೆದಾರರು ಪೂರ್ತಿ ವೇತನ ಪಾವತಿಸುವಂತೆ ಪಟ್ಟುಹಿಡಿದಿದ್ದಾರೆ.