ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ದರ್ಜೆ 3 ಮತ್ತು 4ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ಜುಲೈ 4ರಂದು ಜುಲೈ 5ರಿಂದ ಆಗಸ್ಟ್ 18ರವರೆಗೆ ವರ್ಗಾವಣೆಗೆ ಅರ್ಜಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದರು. ಆ ಆದೇಶದಂತೆ ಅರ್ಜಿ ಸಲ್ಲಿಕೆಗೆ ಇಂದು ಕಡೆಯ ದಿನವಾಗಿತ್ತು. ಆದರೆ ಅವರು ಅರ್ಜಿ ಸಲ್ಲಿಕೆ ದಿನಾಂಕವನ್ನು ನೌಕರರ ಹಿತದೃಷ್ಟಿಯಿಂದ ಸೆ.30ರವರೆಗೆ ವಿಸ್ತರಿಸಿ ಇಂದು (ಆ.18) ಆದೇಶ ಹೊರಡಿಸಿದ್ದಾರೆ.
2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 05-07-2023ರ ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾಗಿದ್ದು 30-09-2023 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ www.ksrttorm/transfer ರಲ್ಲಿ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಮಾನ್ಯ ವರ್ಗಾವಣೆಯಲ್ಲಿ ಪತಿ/ಪತ್ನಿ ಪ್ರಕರಣಗಳೊಂದಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು/ತೀವ್ರ ತರಹದ ಅನಾರೋಗ್ಯ (ಎಚ್.ಐ.ವಿ ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗಳು) ಪ್ರಕರಣಗಳಿಗೆ ವಗಾರ್ವಣೆಯಲ್ಲಿ ಶೇ. 5 ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ನೌಕರರು ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಇನ್ನು ಪರಸ್ಪರ ವರ್ಗಾವಣೆಗೆ ಪರಸ್ಪರ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಶೇ.10 ರ ಬದಲಾಗಿ ಶೇ.15 ರಷ್ಟನ್ನು ಪರಿಗಣಿಸಲಾಗುವುದು ಎಂದು ವಿವರಿಸಿದ್ದಾರೆ.
ನೌಕರರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದ್ದು, ಈ ವಿಷಯವನ್ನು ನೌಕರರ ಗಮನಕ್ಕೆ ತರಲು ಹಾಗೂ ಕೇಂದ್ರ ಕಚೇರಿ/ ವಿಭಾಗ/ ಘಟಕದ/ ತರಬೇತಿ ಕೇಂದ್ರ ಕಾರ್ಯಾಗಾರಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.