ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಇದೇ ಇದೇ ಡಿಸೆಂಬರ್ 13ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಸಭೆಯನ್ನು ನಿಗಮದ ಕೇಂದ್ರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದೆ.

ಈ ಹಿಂದೆ ಅಂದರೆ ಕಳೆದ ನ.26ರಂದು ಸಿಎಂ ಅಧ್ಯಕ್ಷತೆಯಲ್ಲಿ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿತ್ತು. ಆದರೆ ಅಂದು ನಡೆದ ಸಭೆಗಳು ವಿಫಲವಾಗಿದ್ದವು. ಹೀಗಾಗಿ ಮತ್ತೆ ಡಿ.13ರಂದು ಸಭೆ ಕರೆಯಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಿರುವ ಸಭೆಗೆ ಎಲ್ಲ ಸಂಘಟನೆಗಳ ತಲಾ ಇಬ್ಬರು ಪದಾಧಿಕಾರಿಗಳು ಹಾಜರಾಗಬೇಕು ಎಂದು KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಮನವಿ ಮಾಡಿದ್ದಾರೆ.
ಇನ್ನು ಸಭೆ ಅಂದು ಬೆಳಗ್ಗೆ 11ಗಂಟೆಗೆ ನೌಕರರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ಹಾಗೂ ಕೆಎಸ್‌ಅರ್‌ಟಿಸಿ & ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿಗಳ ಸಭೆ ನಡೆಯಲಿದೆ.
ಇನ್ನು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ಡಿ.13ರ ಮಧ್ಯಾಹ್ನ ಕರೆಯಲಾಗಿದ್ದು ಸ್ಥಳಾವಕಾಶದ ಲಭ್ಯತೆಯ ದೃಷ್ಟಿಯಿಂದ ಪ್ರತಿ ಕಾರ್ಮಿಕ ಸಂಘಟನೆಯಿಂದ ಇಬ್ಬರು ಪದಾಧಿಕಾರಿಗಳು ಮಾತ್ರ ಹಾಜರಾಗಬೇಕು.
ಈ ಹಿಂದೆ ಸಿಎಂ ಜತೆ ನಡೆದಿರುವ ನಾಲ್ಕು ಸಭೆಗಳು: ಆಗಸ್ಟ್ 4ರಂದು ಹೈ ವೋಲ್ಟೆಜ್ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಇದೇ ರೀತಿ ಬೇಡಿಕೆಗಳ ಕುರಿತು ಜುಲೈ 4ರಂದು ಸಂಜೆ ಮತ್ತೆ ಸಭೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಸಭೆಗಳು ಸೇರಿದಂತೆ ಒಟ್ಟು ಸಿಎಂ ಅಧ್ಯಕ್ಷತೆಯಲ್ಲಿ 4 ಸಭೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ನ.26ರಂದು ನಡೆದ 5ನೇ ಸಭೆಯಲ್ಲಾದರೂ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬ ವಿಶ್ವಾಸದಲ್ಲಿ ಸಂಘಟನೆಗಳು ಇದ್ದವು ಆದರೆ ಅಂದಿನ ಸಭೆಕೂಡ ವಿಫಲವಾಯಿತು.
ಹೀಗಾಗಿ ಮತ್ತೆ ಡಿ.13ರಂದು ಸಾರಿಗೆ ಸಚಿವ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಾದರೂ ಸಾರಿಗೆ ನೌಕರರ ವೇತನಕ್ಕೆ ಸಂಬಂಧಪಟ್ಟಂತೆ ಅಂತಿಮಾ ತೀರ್ಮಾನ ತೆಗೆದುಕೊಳ್ಳಬೇಕಿದ್ದು ಮತ್ತೆ ಅದೇ ವಿಶ್ವಾಸದಲ್ಲಿ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ಆಶಾಭಾವನೆ ಹೊಂದಿದ್ದಾರೆ.
ನೌಕರರ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?: ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಆಗಬೇಕಿರುವ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ.
ಈ ಸಂಬಂಧ ಈ ಹಿಂದೆಯೇ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟವೂ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆ ಈಡೇರಿಕೆ ಬಗ್ಗೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಸೇರಿದಂತೆ ಪ್ರಮುಖರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.
ಕಳೆದ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಇನ್ನು ನೌಕರರಿಗೆ ಸಿಕ್ಕಿಲ್ಲ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಅವಧಿ ಮುಗಿದು 23 ತಿಂಗಳು ಕಳೆದರೂ ಆ ಬಗ್ಗೆಯೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
Related










