
- ಇನ್ನೂ ಬರೆಬೇಕಿದೆ ಸುಮಾರು 5 ಲಕ್ಷ ರೂಪಾಯಿ ಲಂಚದ ಹಣ
- ಇಲ್ಲಿ ನಿಜವಾಗಿಯೂ ಲಂಚ ಪಡೆದ ಅಧಿಕಾರಿಗಳು ಸೇಫ್
- ಫೋನ್ ಪೇ ಮೂಲಕ ಲಂಚ ವಸೂಲಿ ಮಾಡಿದ ನೌಕರನಿಗೆ ಆಪತ್ತು
ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ರಾಮನಗರ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ನಡೆದಿದ್ದ ಲಂಚಾವತಾರವನ್ನು ಬಹಿರಂಗ ಪಡಿಸಿದ್ದು, ಇದರಿಂದ ಈಗಾಗಲೇ 1.12ಲಕ್ಷ ರೂ. ಲಂಚದ ಹಣ ಫೋನ್ ಪೇ ಮೂಲಕವೇ ವಾಪಸ್ ಬಂದಿದೆ.
KSRTC ಬೆಂಗಳೂರು ಘಟಕ-6ರ ನೌಕರರೊಬ್ಬರು ಇದನ್ನು ಬಯಲಿಗೆಳೆದಿದ್ದಾರೆ. ಅಲ್ಲದೆ ಈ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಲಿಖಿತ ದೂರು ನೀಡಿ ನೌಕರರಿಗೆ ವಿವಿಧ ರೀತಿ ಭಯ ಹುಟ್ಟಿಸಿ ಲಂಚ ಪಡೆದಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಮನಗರ ವಿಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 6.12 ಲಕ್ಷ ರೂ.ಗಳನ್ನು ನಾಲ್ವರಿಂದ ಲಂಚವಾಗಿ ಪಡೆದಿದ್ದು, ಅದರಲ್ಲಿ ಎರಡು ವರ್ಷದ ಬಳಿಕ 1.12ಲಕ್ಷ ರೂಪಾಯಿಯನ್ನು ವಾಪಸ್ ಕೊಟ್ಟಿದ್ದಾರೆ. ಈ ವಾಪಸ್ ಕೊಟ್ಟಿರುವುದು ನಾವು ಎಲ್ಲಿ ಸಿಕ್ಕಿ ಬೀಳುತ್ತೇವೋ ಎಂಬ ಭಯದಿಂದ.
ಅಲ್ಲದೆ ಇದರ ಹಿಂದೆ ರಾಮನಗರ ವಿಭಾಗದ ಅಂದಿನ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೆಲ ಡಿಪೋ ವ್ಯವಸ್ಥಾಪಕರು ಸೇರಿದಂತೆ ಇತರೆ ಅಧಿಕಾರಿಗಳು ಈ ಲಂಚದ ಹಣವನ್ನು ತಮಗೆ ಆಪ್ತರಾಗಿರುವವರ ಫೋನ್ ಪೇ ಮೂಲಕ ವಸೂಲಿ ಮಾಡಿಸಿದ್ದಾರೆ. ಆದರೆ, ಈಗ ನೌಕರರಿಂದ ಫೋನ್ ಪೇ ಮೂಲಕ ಪಡೆದವರು ಸಿಕ್ಕಿಬಿದ್ದಿದ್ದಾರೆ.
ಆದರೆ, ನಿಜವಾದ ಲಂಚಕೋರ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾರಿಕೊಳ್ಳುತ್ತಿದ್ದಾರೆ. ಕಾರಣ ನೇರವಾಗಿ ನೌಕರರ ಲಂಚವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಟ್ಟಿಲ್ಲ ಜತೆಗೆ ಅಧಿಕಾರಿಗಳು ಫೋನ್ ಪೇ ಮೂಲಕ ಲಂಚ ಪಡೆದಿಲ್ಲ ಅವರು ಏನಿದ್ದರೂ ಕವರ್ ಮೂಲಕ ಪಡೆದು ಯಾರನ್ನೋ ಇಲ್ಲಿ ಹರಕೆಯ ಕುರಿ ಮಾಡಿದ್ದಾರೆ.
ಈ ಹರಕೆಯ ಕುರಿಯಾದವರು ಈಗ ಅಂದರೆ ಮಾರ್ಚ್ ತಿಂಗಳಲ್ಲಿ ಲಂಚ ಪಡೆದ ಹಣವನ್ನು ಅದೇ ಫೋನ್ ಪೇ ಮೂಲಕ ವಾಪಸ್ ನೌಕರರಿಗೆ ಕೊಟ್ಟಿದ್ದಾರೆ. ಇದರ ಜತೆಗೆ ಇನ್ನೂ ಸುಮಾರು 5 ಲಕ್ಷ ರೂಪಾತಿ ಲಂಚದ ಹಣ ವಾಪಸ್ ಬರಬೇಕಿದೆ ಎಂದು ಇದರ ವಿರುದ್ಧ ಹೋರಾಟ ಮಾಡುತ್ತಿರುವ ನೌಕರ ತಿಳಿಸಿದ್ದಾರೆ.
ಇನ್ನು ನಾನು ಕೊಟ್ಟಂತಹ ದೂರಿನಲ್ಲಿ ರಾಮನಗರ ಘಟಕದ ನೌಕರ ಸಾರಿಗೆ ಸಂಸ್ಥೆಯಲ್ಲಿ ಹಲವು ನೌಕರರಿಗೆ ಆಡಳಿತ ಕಚೇರಿಯಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಲಂಚದ ರೂಪದಲ್ಲಿ ತೆಗೆದುಕೊಂಡಂತಹ ಹಣವು ಹಂತ ಹಂತವಾಗಿ ವಾಪಸ್ ಅವರ ಖಾತೆಗೆ ಫೋನ್ ಪೇ ಮುಖಾಂತರ ಜಮಾ ಆಗಿದೆ.
ಅದರಲ್ಲಿ ಮಾಗಡಿ ಘಟಕದ ನೌಕರನೊಬ್ಬನಿಗೆ 50 ಸಾವಿರ ರೂ. ಸಾರಿಗೆ ಸಂಸ್ಥೆಯನ್ನು ಹೊರತುಪಡಿಸಿ ಅನ್ಯ ವ್ಯಕ್ತಿಯಿಂದ ಪಡೆದುಕೊಂಡಂತಹ 12 ಸಾವಿರ ರೂ. ಚನ್ನಪಟ್ಟಣ ಘಟಕ ನೌಕರನಿಗೆ 50 ಸಾವಿರ ರೂ. ವಾಪಸ್ ಆಗಿದೆ ಎಂದು ಮಾಹಿತಿ ಬಂದಿರುವುದಾಗಿ ಬೆಂಗಳೂರು ಘಟಕ-6ರ ನೌಕರ ತಿಳಿಸಿದ್ದಾರೆ.
ಅಲ್ಲದೆ ವಿವಿಧ ರೀತಿಯಲ್ಲಿ ನೌಕರರಿಂದ ಪಡೆದಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಫೋನ್ ಪೇ ಹಣ ರಾಮನಗರ ಘಟಕದ ನೌಕರರಿಗೆ ಕೊಟ್ಟಿರುವ ಮಾಹಿತಿ ದಾಖಲೆಗಳು ಇದ್ದು, ಇದನ್ನೆಲ್ಲವನ್ನು ಲಗತ್ತಿಸಿ ಕೇಂದ್ರ ಕಚೇರಿಗೆ ಮತ್ತೆ ನಾನೇ ದೂರನ್ನು ಕೊಡುತ್ತೇನೆ.
ರಾಮನಗರ ವಿಭಾಗದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರುವುದು ಹಂತ ಹಂತವಾಗಿ ಬೆಳಕಿಗೆ ಬರುತ್ತದೆ ಎಂದು ಮತ್ತೆ ದೂರು ಸಲ್ಲಿಸುತ್ತೇನೆ. ಆದರೆ, ಈಗ ಕೊಟ್ಟಿರುವ ದೂರಿಗೆ ಕೇಂದ್ರ ಕಚೇರಿಯಿಂದ ಒಂದು ತನಿಖಾ ತಂಡವನ್ನು ತಯಾರು ಮಾಡಿ ನಿನ್ನೆ ನನ್ನ ಸಮ್ಮುಖದಲ್ಲೇ ನನ್ನ ದೂರನ್ನು ಮುಖ್ಯ ಭದ್ರತಾ ಜಾಗೃತಾಧಿಕಾರಿಗಳು ತನಿಖಾ ತಂಡಕ್ಕೆ ಕೊಟ್ಟಿದ್ದು ಸೂಕ್ತ ತನಿಖೆ ನಡೆಯಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಯಾರ್ಯಾರು ಈ ರೀತಿ ಅನ್ಯಾಯಕ್ಕೆ ಒಳಗಾಗಿದ್ದೀರಾ ಅವರೆಲ್ಲರೂ ಕೂಡ ನನಗೆ ದಾಖಲೆ ಸಮೇತ ಮಾಹಿತಿ ಕೊಟ್ಟರೆ ಅವರ ಹೆಸರನ್ನು ಮತ್ತು ದಾಖಲೆಗಳನ್ನು ಗೌಪ್ಯವಾಗಿಟ್ಟು ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದರ ಜತೆಗೆ, ಕರ್ನಾಟಕ ಲೋಕಾಯುಕ್ತ ಸಂಸ್ಥೆಗೂ ದೂರನ್ನು ಕೊಟ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನ ಸೆಳೆದು ತನಿಖೆ ಮಾಡಿಸಲು ಮುಂದಾಗುತ್ತೇನೆ, ಆದ್ದರಿಂದ ಯಾರ್ಯಾರು ಹಣ ಕೊಟ್ಟಿದ್ದೀರ ಅವರೆಲ್ಲರೂ ಕೂಡ ನನಗೆ ದಾಖಲೆ ಸಮೇತ ಕೊಡಿ ತಮಗೆ ನ್ಯಾಯ ಕೊಡಿಸುವಲ್ಲಿ ನಾನು ಬದ್ಧನಿದ್ದೇನೆ ಎಂದುKSRTC ಬೆಂಗಳೂರು ಘಟಕ-6ರ ನೌಕರ ತಿಳಿಸಿದ್ದಾರೆ.