ಮೈಸೂರು: ಚಲಿಸುತ್ತಿದ್ದಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಹಿಂಬದಿಯ 2 ಚಕ್ರಗಳೂ ಕಳಚಿ ಬಿದ್ದ ಘಟನೆ ಹಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿ ಇಂದು ನಡೆದಿದೆ.
ಚಲಿಸುತ್ತಿದ್ದ ಬಸ್‌ನ ಹಿಂದಿನ ಚಕ್ರ ಕಳಚಿ ಬಿದ್ದರೂ ಸಂಭವನೀಯ ಭಾರಿ ಅಪಾಯವನ್ನು ತಪ್ಪಿಸುವಲ್ಲಿ ಸಮಯ ಪ್ರಜ್ಞೆ ಮೆರೆಯುವಲ್ಲಿ ಚಾಲಕ ಯಶಸ್ವಿಯಾಗಿದ್ದು ಬಸ್‌ನಲ್ಲಿ ಇದ್ದ 39 ಜನರ ಪ್ರಾಣ ಉಳಿಸಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ಘಟಕಕ್ಕೆ ಸೇರಿದ ಬಸ್ ಸೋಮವಾರಪೇಟಿಯಿಂದ ಮೈಸೂರಿಗೆ ಬರುತ್ತಿದ್ದಾಗ ಯಶೋಧರಪುರ ಗೇಟ್ ಬಳಿಯ ಹಂಪ್ ಹತ್ತುತ್ತಿದ್ದಂತೆ ಬ್ಲೇಡ್ ತುಂಡಾಗಿ ಹೌಸಿಂಗ್ ಸಹಿತ ಚಕ್ರಮಗಳು ಕಳಚಿಬಿದ್ದಿವೆ.
ಚಲಿಸುತ್ತಿದ್ದಾಗಲೇ ಬಸ್‌ನ 2 ಚಕ್ರಗಳು ಏಕಕಾಲದಲ್ಲಿ ಕಳಚಿ ಬಿದ್ದಿದ್ದು, ಅದೂಕೂಡ ವೀಲ್ ಬಾಡಿ ಸಮೇತ ಹಿಂದಿನ 2 ಚಕ್ರಗಳು ಉರುಳಿ ಹೋಗಿವೆ. ಬಸ್ ಸ್ಲೋ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದವರಲ್ಲಿ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಲ್ಲಿ ಸ್ವಲ್ಪ-ಹೆಚ್ಚು ಕಡಿಮೆಯಾಗಿದ್ದರೂ ಸರ್ಕಾರ ಭಾರೀ ಬೆಲೆ ತೆರಬೇಕಾಗಿತ್ತು.
ಇದೇ ಮೊದಲಲ್ಲ: ಈ ರೀತಿ ಅವಘಡ ನಡೆದಿರುವುದು ಇದೇ ಮೊದಲಲ್ಲ ಕಳೆದ 2022ರ ಆಗಸ್ಟ್ 25ರಂದು ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪವು ಈ ರೀತಿಯ ಘಟನೆ ನಡೆದಿತ್ತು. ಆ ಬಸ್ ಹಾಸನ ಡಿಪೋಗೆ ಸೇರಿದ್ದಾಗಿತ್ತು. ಅಂದು ಕೂಡ ಬಸ್ ಸ್ಲೋ ಇದ್ದ ಕಾರಣ ಭಾರೀ ಅನಾಹುತ ತಪ್ಪಿತ್ತು. ಬಸ್ಸಿನಲ್ಲಿದ್ದವರು ಸಣ್ಣ-ಪುಟ್ಟ ಗಾಯಗೊಂಡಿದ್ದನ್ನು ಬಿಟ್ಟರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.
ಇನ್ನು 2020ರ ಅಕ್ಟೋಬರ್ 13ರ ಬೆಳಗ್ಗೆ ವಿಜಯಪುರದ ಮುದ್ದೇ ಬಿಹಾಳ ಪಟ್ಟಣದಿಂದ ನಾರಾಯಣಪುಕ್ಕೆ ಹೊರಟಿದ್ದ ಕೆಕೆಆರ್‌ಟಿಸಿ ಸಂಸ್ಥೆಯ ಬಸ್, ನಾಲತವಾಡ ಬಳಿ ಬರುತ್ತಲೇ ಬಸ್ಸಿನ ಹಿಂಬದಿ ಚಕ್ರ ಕಳಚಿ ಬಿದಿತ್ತು. ಅಂದು ಕೂಡಲೇ ಎಚ್ಚೆತ್ತ ಚಾಲಕ ಬಸವರಾಜ ಕರಿಭಾವಿ, ತಮ್ಮಲ್ಲಿನ ಚಾಲನಾ ಕೌಶಲ್ಯದಿಂದ ಬಸ್ ನಿಯಂತ್ರಣಕ್ಕೆ ತಂದು, ಸುರಕ್ಷಿತವಾಗಿ ನಿಲ್ಲಿಸಿದ್ದರು.
ಈ ರೀತಿಯ ಅವಘಡಕ್ಕೆ ಘಟಕದಲ್ಲಿ ನಡೆಯುವ ಅವ್ಯವಹಾರವೇ ಕಾರಣ ಎಂದು ನೌಕರರು ಆರೋಪಿಸಿದ್ದಾರೆ. ಬಸ್‌ಗಳ ಬಿಡಿ ಭಾಗಗಳನ್ನು ಸರಿಯಾಗಿ ತಂದು ಕೊಡದೆ ಕೆಟ್ಟು ಹೋಗಿರುವ ಬಸ್‌ನ ಬಿಡಿ ಭಾಗಗಳನ್ನು ಮತ್ತೊಂದು ಬಸ್‌ಗೆ ಹಾಕಿಸಿ ಕಳುಹಿಸುತ್ತಾರೆ. ಜತೆಗೆ ಬಿಡಿ ಭಾಗಗಳನ್ನು ಖರೀದಿಸಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿ ಸಂಸ್ಥೆಯ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ಕಳ್ಳಾಟದಿಂದ ಸಾರಿಗೆ ಚಾಲನಾ ಸಿಬ್ಬಂದಿ ಮತ್ತು ಸಾರ್ವಜನಿಕರು ಪ್ರಾಣ ಬಿಗಿಹಿಡಿದುಕೊಂಡು ಸಂಚರಿಸುವ ಸ್ಥಿತಿ ಇಂದು ಬಂದೊದಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.