ಮೈಸೂರು: ಸಾರಿಗೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಪ್ರಸ್ತುತ ನೌಕರರ ಕೊರತೆ ಎದುರಿಸುವಂತಾಗಿದೆ. ಹೀಗಾಗಿ 13 ಸಾವಿರ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತೀ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಗರದ ಜಗಮೋಹನ ಅರಮನೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನಾಲ್ಕೂ ನಿಗಮ) ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಸರ್ಕಾರದಲ್ಲಿ ನೇಮಕಕ್ಕೆ ಆದೇಶ ನೀಡಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿತ್ತು, ಎರಡನೇ ಬಾರಿಗೆ ಸಚಿವನಾದ ಬಳಿಕ ನೇಮಕಾತಿಗೆ ಆದ್ಯತೆ ಕೊಟ್ಟಿದ್ದೇನೆ. 13 ಸಾವಿರ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಸಾರಿಗೆ ಇಲಾಖೆಯ 1.25 ಲಕ್ಷ ನೌಕರರಲ್ಲಿ 13 ಸಾವಿರ ಸಿಬ್ಬಂದಿ ಕೊರತೆಯಿದ್ದರೆ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಹಾಲಿ ಕರ್ತವ್ಯ ನಿರತ ನೌಕರರಿಗೂ ರಜೆ ಕೊಡದ ಸ್ಥಿತಿ ನಿರ್ಮಾಣವಾಗಿದೆ. ಈ ತೊಂದರೆ ನಿವಾರಣೆಯ ದೃಷ್ಟಿಯಿಂದಲೂ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜನರಿಗೆ ಉತ್ತಮ ಸೌಲಭ್ಯ ಮಾಡಕೊಡುತ್ತೇವೆ ಎಂದರು.
ಬಸ್ ಖರೀದಿಗೂ ಆದ್ಯತೆ: ಹಿಂದಿನ ಬಿಜೆಪಿ ಸರ್ಕಾರ 4 ವರ್ಷಗಳಲ್ಲಿ ಒಂದೂ ಬಸ್ ಖರೀದಿಸಲಿಲ್ಲ. ಕೊನೇ ವರ್ಷದಲ್ಲಿ ಬಸ್ ಖರೀದಿಸುವ ನಿರ್ಧಾರ ಮಾಡಿದರು. ಬಸ್ ಕೊರತೆಯಿದ್ದುದ್ದರಿಂದ ಸಾರಿಗೆ ಸೌಲಭ್ಯ ನೀಡಲು ತೊಂದರೆಯಾಯಿತು. ಹೀಗಾಗಿ ಬಸ್ ಖರೀದಿಸಿ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಂಸ್ಥೆಗೆ 400ಕ್ಕೂ ಹೆಚ್ಚು ಪ್ರಶಸ್ತಿಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದೇಶದಲ್ಲಿಯೇ ಅತ್ಯುತ್ತಮ ನಿಗಮವಾಗಿದೆ. ಈವರೆಗೆ 400ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ. ಈ ಪೈಕಿ ಕೆಎಸ್‌ಆರ್‌ಟಿಸಿಗೆ 200 ಪ್ರಶಸ್ತಿಗಳು ಬಂದಿವೆ. ಕೇಂದ್ರ ಸರ್ಕಾರದ ಎಕ್ಸಲೆನ್ ಪ್ರಶಸ್ತಿಯನ್ನು 6 ವರ್ಷ ಸತತವಾಗಿ ಪಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸೇವೆ ನೀಡುತ್ತಿದ್ದೇವೆ. ಇದಕ್ಕೆ ಅಧಿಕಾರಿಗಳು ನೌಕರರ ಪರಿಶ್ರಮವೇ ಕಾರಣ ಎಂದು ಸಂತಸ ಹಂಚಿಕೊಂಡರು.
ಶಾಸಕ ತನ್ವೀರ್ ಸೇಠ್ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿದರು. ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಚಾಮರಾಜನಗರದ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ರವೀಂದ್ರ, ಮಾಜಿ ಮೇಯರ್ ಪರುಷೋತ್ತಮ, ಪಾಲಿಕೆ ಸದಸ್ಯ ಜಿ.ಎಸ್ ಸತ್ಯರಾಜ್, ಸಂಘಟನೆಯ ರಾಜ್ಯ ಸಮಿತಿ ಗೌರವಾಧ್ಯಕ್ಷ ಡಾ.ಆರ್.ಮೋಹನ್.
ಮೈಸೂರು ವಿಭಾಗದ ಅಧ್ಯಕ್ಷ ಸ್ವಾಮಿ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬರಗೂರು, ಕಲ್ಯಾಣ ಕರ್ನಾಟಕ ವಲಯ ಸಮಿತಿ ಅಧ್ಯಕ್ಷ ರಾಜ್‌ಕುಮಾರ್ ಎಂ.ಗೌತಮ್ ಯಕಂಚಿ, ಹುಬ್ಬಳಿ ವಲಯ ಪ್ರಧಾನ ಕಾರ್ಯದರ್ಶಿ ಎ.ಜಿ.ಯಾವುಗಲ್, ತುಮಕೂರು ವಿಭಾಗದ ಅಧ್ಯಕ್ಷ ಹಾಗೂ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ತುಮಕೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸಂ.ಕಾ. ವನರಂಗಪ್ಪ ಡಿ.ಸಿ., ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಪ್ರದೀಪ್ ಎಂ. ಮೈಸೂರು ವಿಭಾಗದ ಮತ್ತು ಎಲ್ಲ 4 ನಿಗಮಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಕ್ತಿ ಯೋಜನೆ ಜಾರಿಯಾದ 100 ದಿನಗಳಲ್ಲಿ 55 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿ ನಿತ್ಯ 60 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸಂಬಳ ಕೊಡಲಾಗದು, ಡೀಸೆಲ್‌ಗೆ ಹಣ ಇರುವುದಿಲ್ಲ ಎಂಬ ಹಲವು ನಾಯಕರ ಟೀಕೆ ಸುಳ್ಳಾಗಿದೆ. ನಮ್ಮ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ.
l ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ