ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರಿಬ್ಬರ ಕುಟುಂಬದವರಿಗೆ ತಲಾ ವಿಮೆ ಮೊತ್ತ 1 ಕೋಟಿ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.
ಇಂದು ಸಾರಿಗೆ, ಮುಜರಾಯಿ ಸಚಿವ ಹಾಗೂ ನಿಗಮದ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು, ಅಪಘಾತದಲ್ಲಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಅವಲಂಬಿತರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1 ಕೋಟಿ ಅಪಘಾತ ವಿಮೆ ಪರಿಹಾರ ಚೆಕ್ ನೀಡಿದರು.
ಕೆಎಸ್ಆರ್ಟಿಸಿಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ.ಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನಿಂದ ವಾರ್ಷಿಕ 885 ರೂ. ಪ್ರೀಮಿಯಂ (ನೌಕರರಿಂದ) ಪಾವತಿ ಮೇರೆಗೆ 50 ಲಕ್ಷ ರೂ.ಗಳ ವಿಮೆಯು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾಗ ಅಥವಾ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸಲಿದೆ.
- ಈ ಯೋಜನೆಯ ಜಾರಿಯ ನಂತರದಲ್ಲಿ ಕೆಎಸ್ಆರ್ಟಿಸಿಯ ಚಾಲನಾ ಸಿಬ್ಬಂದಿ ಜಿ.ವಿ.ಚಲಪತಿ, 41 ವರ್ಷ, ಚಾಲಕ-ಕಂ-ನಿರ್ವಾಹಕ (ಬಿಲ್ಲೆ ಸಂಖ್ಯೆ 7275, ಘಟಕ-6, ಬೆಂಗಳೂರು ಕೇಂದ್ರೀಯ ವಿಭಾಗ) ಅವರು ನಿಗಮದಲ್ಲಿ 11 ವರ್ಷಗಳ ಸೇವೆ ಸಲ್ಲಿಸಿದ್ದರು.
ಚಲಪತಿ ಅವರು 29/01/2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಕುಟುಂಬದವರಿಗೆ ವಿಮಾ ಪರಿಹಾರ 1 ಕೋಟಿ ರೂ.ಗಳನ್ನು ಇಂದು ವಿತರಿಸಲಾಯಿತು.
ಅದರ ಜತೆಗೆ ಚಲಪತಿ ಅವರಿಗೆ ನಿಗಮದಿಂದ ಬರಬೇಕಿರುವ ಪಿಎಫ್, ಗ್ರಾಚ್ಯುಟಿ ಸೇರಿದಂತೆ 17.21 ಲಕ್ಷ ರೂ.ಗಳಲ್ಲಿ ಈಗಾಗಲೇ ಈ ಪೈಕಿ 12.71 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. ಬಾಕಿ ಮೊತ್ತ 4.50 ಲಕ್ಷ ರೂ.ಗಳನ್ನು ಮೃತ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿ ಪಾವತಿಯಾಗಲಿದೆ ಎಂದು ನಿಗಮದ ಎಂಡಿ ಅನ್ಬುಕುಮಾರ್ ತಿಳಿಸಿದ್ದಾರೆ.
- ಪಿ.ಎನ್. ನಾಗರಾಜು, 52 ವರ್ಷ, ಚಾಲಕ-ಕಂ-ನಿರ್ವಾಹಕ (ಬಿಲ್ಲೆ ಸಂಖ್ಯೆ. 1173, ಘಟಕ-2, ಹಾಸನ ವಿಭಾಗ) ಅವರು ನಿಗಮದಲ್ಲಿ 17 ವರ್ಷಗಳ ಸೇವೆ ಸಲ್ಲಿಸಿದ್ದರು. ನಾಗರಾಜು 01/02/2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ವಿಮಾ ಪರಿಹಾರ 1 ಕೋಟಿ ರೂ. ಹೊರತುಪಡಿಸಿ, ಪಿಎಫ್, ಗ್ರಾಚ್ಯುಟಿ ಸೇರಿ ನಿಗಮದ ವತಿಯಿಂದ 21.94 ಲಕ್ಷ ರೂ. ಬರಬೇಕಿದ್ದು, ಈ ಪೈಕಿ 16.19 ಲಕ್ಷ ರೂ.ಗಳನ್ನು ಈಗಾಗಲೇ ವಿತರಿಸಲಾಗಿದೆ. ಬಾಕಿ 5.75 ಲಕ್ಷ ರೂ.ಗಳನ್ನು ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಚಿವರು ಚಾಲನಾ ಸಿಬ್ಬಂದಿಗಳ ಈ ಎರಡು ಕುಟುಂಬ ವರ್ಗದವರಿಗೆ ಅಪಘಾತ ಪರಿಹಾರ ವಿಮೆಯ ಮೊತ್ತ ತಲಾ 1 ಕೋಟಿ ರೂ.ಗಳ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಟುಂಬದವರು ಈ ಹಣವನ್ನು ಬ್ಯಾಂಕ್ನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಅನುಕಂಪದ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು.