ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಕಲೇಶಪುರ ಘಟಕದ AWS ಹಾಗೂ ಪ್ರಭಾರಿ ಘಟಕ ವ್ಯವಸ್ಥಾಪಕರು ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಜಾಮ ಎಂಬ ಪದ ಬಳಕೆ ಮಾಡಿ ಬೈದಿರುವುದನ್ನು ಖಂಡಿಸಿ ಮತ್ತು ಅವರನ್ನು ವಜಾ ಮಾಡಬೇಕು ಎಂದು ಆಗ್ರಹಸಿ ಸವಿತ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ನೌಕರರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುವ ಸಕಲೇಶಪುರ ಘಟಕದ AWS ಹಾಗೂ ಪ್ರಭಾರಿ ಘಟಕ ವ್ಯವಸ್ಥಾಪಕ ಜಗನ್ನಾಥ್ ಹಜಾಮ ಎಂಬ ಪದ ಬಳಕೆ ಮಾಡಿ ಬೈಯುವುದನ್ನು ಖಂಡಿಸಿ ಸಕಲೇಶಪುರ ತಾಲೂಕಿನ ಸವಿತ ಸಮಾಜದವರು ಮಂಗಳವಾರ ಪಟ್ಟಣದ ಡಿಪೋ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜಾತಿ ನಿಂದನೆ ಮಾಡಿರುವ ಪ್ರಭಾರಿ ವ್ಯವಸ್ಥಾಪಕ ಜಗನ್ನಾಥನನ್ನು ವಜಾಮಾಡಿ, ಕಾನೂನು ಕ್ರಮ ಜರುಗಿಸಬೇಕು. ನಿಷೇಧಿತ ಪದಬಳಕೆ ಮಾಡುವ ಮೂಲಕ ನಮ್ಮ ಸಮಾಜವನ್ನು ನಿಕೃಷ್ಟವಾಗಿ ಕಾಣುತ್ತಿರುವ ಈತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಘಟಕದ ನೌಕರರಿಗೆ ಈತ ಕೆಟ್ಟ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಾನೆ. ಈ ಕುರಿತು ಮೇಲಿನ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ.
ಬಸ್ಗಳ ಪ್ಲಾಟ್ ಫಾರಂಗಳು ಹಾಳಾಗಿದ್ದು ಏನಾದರೂ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಜಗನ್ನಾಥ್ ಉದಾಸೀನತೆಯಿಂದ ನಡೆದುಕೊಳ್ಳುವ ಜತೆಗೆ ನೌಕರರನ್ನು ಬೈಯುವುದು ಮಾಡುತ್ತಾನೆ ಎಂದು ನೌಕರರ ಪರವಾಗಿ ಸವಿತ ಸಮಾಜದ ನಾಯಕರು ಕಿಡಿಕಾರಿದರು.
ಕೆಟ್ಟಪದಗಳಿಂದ ನಿಂದಿಸಿ ಬೇಕಾದರೆ ತಗೋ ಹೋಗು ಇಲ್ಲವಾದರೆ ಬಿಡು ಇಲ್ಲಿ ಇರುವುದೇ ಇಂಥ ಬಸ್ ಎಂದು ಸಿಬ್ಬಂದಿಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾನೆ. ಆದರೂ ಅಧಿಕಾರಿಗಳು ಈತನನ್ನು ಈವರೆಗೆ ಬಿಟ್ಟುಕೊಂಡು ನೌಕರರನ್ನು ಹಿಂಸಿಸುವುದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಇನ್ನು ಈತನ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ ವಜಾ ಮಾಡದಿದ್ದರೆ ಹಾಸನ ಜಿಲ್ಲೆಯ ಸಮಸ್ತ ಸವಿತ ಸಮಾಜದ ಸಂಘಟನೆಗಳು ಬೀದಿಗಳಿದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸವಿತ ಸಮಾಜದ ಪುರುಷ ಮತ್ತು ಮಹಿಳಾ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.