ರಾಜ್ಯ ಸರ್ಕಾರ ರಚಿಸುವ ವೇತನ ಆಯೋಗವನ್ನು ನಮ್ಮ ನಿಗಮ ಒಳಗೊಂಡಂತೆ ರಚಿಸಿ ರಾಜ್ಯ ಸರ್ಕಾರವೇ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ವೇತನವನ್ನು ನಿಗದಿಪಡಿಸುವ ಕ್ರಮವನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡು ರಾಜ್ಯ ಸರ್ಕಾರಿ ನೌಕರರಿಗೆ ನಿಗದಿ ಪಡಿಸಿದ 7 ನೇ ವೇತನ ಆಯೋಗಕ್ಕೆ “ಸರಿಸಮಾನ ವೇತನವನ್ನು” ಸಂಚಾರ ಮೇಲ್ವಿಚಾರಕರಾದ ನಮ್ಮನ್ನು ಒಳಗೊಂಡಂತೆ ಸಂಸ್ಥೆಯ ಎಲ್ಲ ವರ್ಗದ ನೌಕರರಿಗೂ ಅಳವಡಿಸಿ 2024 ಜನವರಿ 1 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಂಚಾರ ಮೇಲ್ವಿಚಾರಕ ಮತ್ತು ಎಲ್ಲ ಹಂತದ ಸಿಬ್ಬಂದಿಗಳಿಗೂ 7ನೇ ವೇತನ ಆಯೋಗದ “ಸರಿಸಮಾನ ವೇತನ ನೀಡಬೇಕು ಎಂದು ಕರಾರಸಾ ನಿಗಮಗಳ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘದ ಪಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಕೆಎಸ್‌ಅರ್‌ಟಿಸಿ ಎಂಡಿ ಅನ್ಬುಕುಮಾರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ (Principal Secretary) ಅವರಿಗೆ ಕಳೆದ ಅಕ್ಟೋಬರ್ 24-2024ರಂದು ಮನವಿ ಪತ್ರ ಸಲ್ಲಿಸಿರುವ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳಲ್ಲಿ ವಿವಿಧ ಹಂತದಲ್ಲಿ 1 ಲಕ್ಷದ 20 ಸಾವಿರಕ್ಕಿಂತ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಈ ಪೈಕಿ 780 ಕ್ಕಿಂತಲೂ ಹೆಚ್ಚು ಅಧಿಕಾರಿಗಳಿದ್ದು, ಈ ಅಧಿಕಾರಿಗಳು ಸಂಸ್ಥೆ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕೆಲಸ ನಿರ್ವಹಿಸಿದರೆ, ಅಧಿಕಾರಿ ಮತ್ತು ಚಾಲನಾ ಸಿಬ್ಬಂದಿಗಳ’ ನಡುವಿನ ಸೇತುವೆಯಾಗಿ 2500 ಕ್ಕೂ ಹೆಚ್ಚು ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳಾದ ನಾವು ಈ ನಾಲ್ಕು ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕವಾದ ಸಾರಿಗೆ ಸೇವೆಯನ್ನು ನೀಡುವಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ.
ಪ್ರತಿದಿನ ನಾವು ಚಾಲನಾ ಸಿಬ್ಬಂದಿಗಳನ್ನು ವ್ಯವಸ್ಥಿತವಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಿ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯ ಕಲ್ಪಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂದರೆ ಅದು ಜನರ ಜೀವನಾಡಿಯಂತಾಗಿ ಮಾಡುವಲ್ಲಿ ಸಂಸ್ಥೆಯ ಎಲ್ಲ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಶ್ರಮ ಪ್ರಮುಖವಾಗಿದೆ.
ಇನ್ನು ಸರ್ಕಾರದ ಪ್ರತಿಷ್ಠಿತ ಶಕ್ತಿಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿಸುವ ಕಾರ್ಯವನ್ನುಕಾರ್ಯವನ್ನು ಮನಃಪೂರ್ವಕವಾಗಿ ನಿರ್ವಹಿಸುತ್ತಿದ್ದೇವೆ. ನಾವು ಪ್ರತಿದಿನ ಸಮಯದ ಪರಿದಿಯೆ ಇಲ್ಲದೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೇವೆಯನ್ನು ಒದಗಿಸುವ ಗುರುತರ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ನಾವು ಪ್ರತಿದಿನ ಸರಾಸರಿ 14 ಗಂಟೆಗೂ ಹೆಚ್ಚಿನ ಸಮಯ ಹಬ್ಬ-ಹರಿದಿನಗಳಂದು ರಜೆಗಳಿಲ್ಲದೇ, ನಿಯಮಾನುಸಾರ ವಾರಕ್ಕೊಂದು ವಾರದ ರಜೆಯನ್ನು ಸಹ ಪಡೆಯಲು ಸಾಧ್ಯವಾಗದೇ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಈ ರೀತಿಯ ಒತ್ತಡದ ಕೆಲಸವನ್ನು ಸರ್ಕಾರಿ ಸ್ವಾಮ್ಯದ ಯಾವುದೇ ಸಂಸ್ಥೆ/ನಿಗಮ/ರಾಜ್ಯ ಸರ್ಕಾರಿ ನೌಕರಸ್ಥರು ನಿರ್ವಹಿಸುತ್ತಿಲ್ಲ ಆದಾಗ್ಯೂ ದಿನಕ್ಕೆ 8 ಗಂಟೆ ಕೆಲಸ ಮಾಡುವ ವಾರಕ್ಕೊಂದು ದಿನ ಕಡ್ಡಾಯ ವಾರದ ರಜೆ, ಹಬ್ಬದ ರಜೆಗಳನ್ನು ಪಡೆಯುವ ಸರ್ಕಾರಿ ನೌಕರರಿಗೆ ಉತ್ತಮ ವೇತನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಗದಿಪಡಿಸಿವೆ.
ಆದರೆ ಸಮಯದ ಪರಿವಿಲ್ಲದೇ ದುಡಿಯುವ ನಮ್ಮ ಸಂಚಾರ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರಿ ನೌಕರರಂತೆ ಸರಿಸಮದಾದ ವೇತನವಿರಲಿ ನಮ್ಮ ಸಂಸ್ಥೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಮೇಲ್ವಿಚಾರಕ ಸಿಬ್ಬಂದಿಗಳಿಗೆ ನೀಡುವ ವೇತನದಲ್ಲಿಯೇ ಸಾಕಷ್ಟು ತಾರತಮ್ಯತೆ ಇರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ 4 ವರ್ಷಗಳಿಗೊಮ್ಮೆ ಸಂಸ್ಥೆ ಮತ್ತು ನೌಕರರ ಮಧ್ಯೆ ವೇತನ ಒಪ್ಪಂದ ನಡೆಯುತ್ತಿದ್ದು ಇದು ಪ್ರಸ್ತುತ ದಿನಮಾನಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ ನಡೆದುಕೊಂಡು ಬರುತ್ತಿದೆ.
ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಈ ವೇತನ ಒಪ್ಪಂದಕ್ಕಾಗಿ ನಾವೆಲ್ಲಾ ಚಾತಕ ಪಕ್ಷಿಯಂತೆ ಕಾಯುವುದು ಮತ್ತು ನಮ್ಮ ಮೇಲ್ವಿಚಾರಕೇತರ ನೌಕರ ಸಿಬ್ಬಂದಿಗಳು ಅನಗತ್ಯ ಮುಷ್ಕರದಂತ ಕೆಲಸಗಳಿಗೆ ಕೈ ಹಾಕುವುದು, ಸಂಸ್ಥೆಯನ್ನ ನಂಬಿ ಬದುಕುತ್ತಿರುವ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ನೀಡುವಲ್ಲಿ ಅಡಚಣೆಯಾಗುವುದು ಮತ್ತು ಸಂಸ್ಥೆಯ ಘನತೆಗೆ ಧಕ್ಕೆಯುಂಟಾಗುವುದು ಈ ಎಲ್ಲ ಕಾನುನೂಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ತಮ್ಮ ಮಹತ್ತರ ಜವಾಬ್ದಾರಿಯಾಗಿದೆ.
ಆದ್ದರಿಂದ ಸಂಸ್ಥೆಯ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ “ಚೌಕಾಶಿ” ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ, ರಾಜ್ಯ ಸರ್ಕಾರ ರಚಿಸುವ ವೇತನ ಆಯೋಗವನ್ನು ನಮ್ಮ ನಿಗಮ ಒಳಗೊಂಡಂತೆ ರಚಿಸಿ ರಾಜ್ಯ ಸರ್ಕಾರವೇ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ವೇತನವನ್ನು ನಿಗದಿಪಡಿಸುವ ಕ್ರಮವನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡು ರಾಜ್ಯ ಸರ್ಕಾರಿ ನೌಕರರಿಗೆ ನಿಗದಿ ಪಡಿಸಿದ 7 ನೇ ವೇತನ ಆಯೋಗಕ್ಕೆ “ಸರಿಸಮಾನ ವೇತನವನ್ನು” ಸಂಚಾರ ಮೇಲ್ವಿಚಾರಕರಾದ ನಮ್ಮನ್ನು ಒಳಗೊಂಡಂತೆ ಸಂಸ್ಥೆಯ ಎಲ್ಲ ವರ್ಗದ ನೌಕರರಿಗೂ ಅಳವಡಿಸಿ 2024 ಜನವರಿ 1 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸುವುದು ಕಾರ್ಮಿಕರ/ನೌಕರರ/ಸಂಸ್ಥೆಯ ಹಿತದೃಷ್ಠಿಯಿಂದ ಸೂಕ್ತವಾದ ನಿರ್ಣಯವಾಗುತ್ತದೆ.
ಈ ನಮ್ಮ ಹಕ್ಕೊತ್ತಾಯ/ಮನವಿಯನ್ನು ಸರ್ಕಾರದ ಗಮನಕ್ಕೆ ತಾವು ತರುವ ಮೂಲಕ ಬಹಳ ಶ್ರಮದಿಂದ ದುಡಿಯುವ ಈ ಸಮಾಜದ ಮಧ್ಯಮ ವರ್ಗದ ಎಲ್ಲ ಕಾರ್ಮಿಕ ನೌಕರರ ಕುಟುಂಬಗಳ ನೋವಿಗೆ ಮಾನವೀಯ ಹೃದಯದ ಗೌರವಾನ್ವಿತ ವ್ಯವಸ್ಥಾಪಕ ನಿರ್ದೇಶಕರಾದ ತಾವು ಸ್ಪಂದಿಸುತ್ತಿರೆಂಬ ಅಗಾಧವಾದ ನಂಬಿಕೆ ತಮ್ಮಗಳ ಮೇಲೆ ನಾವೆಲ್ಲರೂ ಹೊಂದಿದ್ದೇವೆ.
ಆರ್ಥಿಕವಾಗಿ, ಸಾಮಾಜಿಕವಾಗಿ & ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಬಸವಣ್ಣನವರ ತತ್ವಗಳ ಮೇಲೆ ನಂಬಿಕೆ ಹೊಂದಿ ಸರ್ಕಾರನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವ ಮೂಲಕ ನಿಗಮ ಪ್ರಾರಂಭದಿಂದಲೂ ನಮ್ಮ ನಿಗಮದ ನೌಕರರೆಲ್ಲ ಅನುಭವಿಸುತ್ತಿರುವ ನೋವಿಗೆ ಇತಿಶ್ರೀ ಹಾಡುವ ಮೂಲಕ “ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತೆ ನಮಗೂ ಸಹ ಸರಿಸಮಾನ ವೇತನವನ್ನು ನಿಗದಿಪಡಿಸುವ” ಮೂಲಕ ಸಮಸ್ತ ನೌಕರರ ಮತ್ತು ಕುಟುಂಬ ವರ್ಗದವರ ಮೊಗದಲ್ಲಿ ನಗು ಅರಳುವಂತೆ ಮಾಡುವಿರೆಂಬ ಅಗಮ್ಯ ವಿಶ್ವಾಸದಿಂದ ತಮ್ಮಲ್ಲಿ ಕಳಕಳಿಯಿಂದ ಕೋರಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ರೇಣುಕಯ್ಯ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಕುಮಾರ ತೋಟಗೇರ ಸೇರಿದಂತೆ ಹಲವರು ಮನವಿ ಪತ್ರಸಲ್ಲಿಸಿದ್ದಾರೆ.