CRIMENEWSನಮ್ಮರಾಜ್ಯ

KSRTC: 3 ಕಡೆ ಪ್ರತ್ಯೇಕ ಬಸ್‌ ಅಪಘಾತ- 22 ಜನರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಉತ್ತರ ಕನ್ನಡ: ರಾಜ್ಯದ ಪ್ರತ್ಯೇಕ ಮೂರು ಸ್ಥಳಗಲ್ಲಿ ಇಂದು ಸಂಭವಿಸಿದ ಸಾರಿಗೆ ಬಸ್​​ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 22 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಾಲಕನ ನಿಯಂತ್ರಣದ ತಪ್ಪಿದ ಬಸ್‌ ಮರಕ್ಕೆ ಬಸ್​​ ಡಿಕ್ಕಿಯಾಗಿ 20 ಜನ ಗಾಯಗೊಂಡಿರುವುದು ಉತ್ತರ ಕನ್ನಡದಲ್ಲಿ ಸಂಭವಿಸಿದ್ದರೆ, ಸೈಕಲ್​​ನಲ್ಲಿ ತೆರಳುತ್ತಿದ್ದಾಗ ಬಸ್​​ ಗುದ್ದಿದ ಪರಿಣಾಮ ಕಲಬುರಗಿಯಲ್ಲಿ ವಿದ್ಯಾರ್ಥಿಯ ಕೈ ಸಂಪೂರ್ಣ ಛಿದ್ರವಾಗಿರುವ ಘಟನೆ ನಡೆದಿದೆ. ಅಲ್ಲದೆ ಬಸ್​​ ಡಿಕ್ಕಿಯಾಗಿ ಹಾವೇರಿಯಲ್ಲೂ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮರಕ್ಕೆ ಗುದ್ದಿದ ಬಸ್​​: ಓವರ್‌ಟೇಕ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್​ ಗುದ್ದಿದ ಪರಿಣಾಮ 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾನಸಗೇರಿ ಗ್ರಾಮದ ಮೊರಾರ್ಜಿ ಹಾಸ್ಟೆಲ್ ಬಳಿ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್ ಚಾಲಕ, 8 ಮಂದಿ ವಿದ್ಯಾರ್ಥಿನಿಯರು, ಇಬ್ಬರು ಶಾಲಾ ಮಕ್ಕಳು, ಇಬ್ಬರು ಮಹಿಳೆಯರು ಮತ್ತು ನಿರ್ವಾಹಕ ಸೇರಿ ಹಲವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಓವರ್‌ಟೇಕ್ ಮಾಡುವ ಸಂದರ್ಭ ಮುಂದಿನಿಂದ ಕಾರು ಬಂದ ಹಿನ್ನೆಲೆ ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್​​ ಮರಕ್ಕೆ ಗುದ್ದಿದೆ. ಗಾಯಾಳುಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ಬಲಗೈ ಛಿದ್ರ: ಸೈಕಲ್​​ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗೆ ಕೆಕೆಆರ್​ಟಿಸಿ ಬಸ್​ ಡಿಕ್ಕಿಯಾಗಿರುವ ಘಟನೆ ಕಲಬುರಗಿಯ ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿ ಇರ್ಫಾನ್ ದವಲಸಾಬ್(15) ಗಂಭೀರ ಗಾಯಗೊಂಡಿದ್ದಾನೆ. ಈ ವಿದ್ಯಾರ್ಥಿ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಪರೀಕ್ಷೆಗೆ ಹೊರಟ್ಟಿದ್ದವನಿಗೆ ಡಿಕ್ಕಿಹೊಡೆದ ಬಸ್​: ಬಸ್​​ ಗುದ್ದಿದ ಪರಿಣಾಮ ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ಕೊಣನತಂಬಿಗಿ ಗ್ರಾಮದ ವಿದ್ಯಾರ್ಥಿ ರೋಹಿತ್ ಕೆಸರಳ್ಳಿ ಎಂಬಾತನ ಬೆನ್ನಿಗೆ ಮತ್ತು ತಲೆಗೆ ಘಟನೆಯಿಂದ ಗಂಭೀರ ಗಾಯಗಳಾಗಿವೆ. ನಗರದ ಹಾಸ್ಟೆಲ್​​ನಲ್ಲಿ ವಾಸವಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಗಾಯಾಳುವನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Megha
the authorMegha

Leave a Reply

error: Content is protected !!