ಬೆಳಗಾವಿ: ಸುವರ್ಣ ಸೌಧದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹತ್ತಿಕ್ಕಲು ಸರ್ಕಾರ ಸುಮಾರು 300 ಜನ ಪೊಲೀಸರನ್ನು ಬಿಟ್ಟಿತ್ತು. ಆದರೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ನೌಕರರು ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಈ ವೇಳೆ ಪೊಲೀಸರು ನಾಳೆ (ಡಿ.24) ಬೆಳಗ್ಗೆ ಏಳು ಗಂಟೆಯೊಳಗಾಗಿ ನೀವು ಎದ್ದು ಹೋಗಿರಬೇಕು ಇಲ್ಲದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ.
ಆದರೆ ನಾವು ಈಗ ಜೀವಂತ ಹೆಣವಾಗಿದ್ದೇವೆ ಹೀಗಾಗಿ ನಾವು ಸತ್ತರೂ ಸರಿಯೇ ನಮ್ಮ ಬೇಡಿಕೆ ಈಡೇರಿಸದ ಹೊರತು ನಾವು ಉಪವಾಸ ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ನೌಕರರು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇನ್ನು ಕಳೆದ ಸುಮಾರು ಮೂರು ವರ್ಷಗಳಿಂದಲೂ ಸರ್ಕಾರದ ಎಲ್ಲ ಸಚಿವರು, ಮುಖ್ಯಮಂತ್ರಿಗಳು ಹಾಗೂ ನಾಲ್ಕೂ ಸಾರಿಗೆ ನಿಗಮಗಳ ಉನ್ನತ ಅಧಿಕಾರಿಗಳು ಆಡಳಿತ ಮಂಡಳಿಗಳಿಗೆ ಸಾವಿರಾರು ಮನವಿ ಸಲ್ಲಿಸಿದ್ದು ಈವರೆಗೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಈ ನಡುವೆ ನಮ್ಮ ಹೋರಾಟವನ್ನು ಹತ್ತಿಕ್ಕಲು ಹೊರಟರೆ ನಾವು ಅದಕ್ಕೆ ಜಗ್ಗುವುದಿಲ್ಲ ಎಂದು ಖಡಕ್ ಆಗಿ ಸರ್ಕಾರಕ್ಕೆ ತಿಳಿಸಿದ್ದಾರೆ.
ನಾವು ಸಾರಿಗೆ ಸಚಿವರಿಗೂ ಈ ಬಗ್ಗೆ ನೂರಾರು ಬಾರಿ ಮನವಿ ಸಲ್ಲಿಸಿದೇವೆ ಅಲ್ಲದೆ ಈ ಹಿಂದೆ ಬಳ್ಳಾರಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ಅಲ್ಲಿಗೆ ಬಂದ ಸಚಿವರು ನಿಮ್ಮ ಬೇಡಿಕೆಗಳನ್ನು ಒಂದು ವಾರದಲ್ಲೇ ಈಡೇರಿಸಿಬಿಡುತ್ತೇವೆ ನಮ್ಮ ಮಾತಿನ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದರು. ಆ ವೇಳೆ ಅವರ ಮಾತಿನ ಮೇಲೆ ನಂಬಿಕೆ ಇಟ್ಟು ಅಂದು ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟೆವು.
ಆದರೆ ಅಂದು ಮಾತು ಕೊಟ್ಟ ಸಾರಿಗೆ ಸಚಿವರು ಇಲ್ಲಿಯವರೆಗೂ ಆ ಬಗ್ಗೆ ಸಭೆಯನ್ನು ಕರೆದಿಲ್ಲ ಅಥವಾ ಬೇಡಿಕೆಗಳನ್ನು ಈಡೇರಿಸಿಯೂ ಇಲ್ಲ. ಮತ್ತೆ ನಾವು ಅವರ ಮಾತಿಗೆ ಒಪ್ಪಿ ಈ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟರೆ ನಮಗೆ ಹಿಂದೆ ಆದ ಸ್ಥಿತಿಯೇ ಈಗಲೂ ಆಗುತ್ತದೆ. ಹೀಗಾಗಿ ನಾವು ಬೇಡಿಕೆ ಈಡೇರುವವರೆಗೂ ಪ್ರಾಣ ಹೋದರೂ ಸರಿಯೇ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಸತ್ಯಾಗ್ರಹ ನಿರತ ನೌಕರರು ಹೇಳಿದ್ದಾರೆ.
ಇನ್ನು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಥಳಕ್ಕೆ ಬಂದು ನಿಮ್ಮ ಬೇಡಿಕೆ ಈಡೇರಿಸಲಿದ್ದಾರೆ. ಹೀಗಾಗಿ ನೀವು ಇಂದು ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟು ಸೋಮವಾರ ಮತ್ತೆ ಆರಂಭಿಸಿ ಎಂದು ಪೊಲೀಸರು ಸಲಹೆ ನೀಡಿದರು. ಆದರೆ ನಾವು ಸಿಎಂ ಬರುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಪೊಲೀಸರಿಗೆ ತಿಳಿಸಿದರು.
ಇದರಿಂದ ಕುಪಿತಗೊಂಡ ಪೊಲೀಸರು ಸತ್ಯಾಗ್ರಹ ನಿರತ ನೌಕರರ ವಿರುದ್ಧ ಏರುಧ್ವನಿಯಲ್ಲೇ ಮಾತನಾಡಿದರು. ಆದರೆ ನೌಕರರು ನಿಮ್ಮ ಕರ್ತವ್ಯಕ್ಕೆ ನಾವು ಅಡ್ಡಿಪಡಿಸುವುದಿಲ್ಲ ನೀವು ನಿಮ್ಮ ಕರ್ತವ್ಯವನ್ನು ಮಾಡಿ ಎಂದು ಸಮಾಧಾನ ಚಿತ್ತದಿಂದಲೇ ಹೇಳಿದರು.
ನೌಕರರ ಸಮಾಧಾನವನ್ನು ಕಂಡ ಪೊಲೀಸರು ಏನು ಮಾತನಾಡಬೇಕು ಎಂಬುದನ್ನು ತಿಳಿಯದೆ ನಾಳೆ ಬೆಳಗ್ಗೆ 7ಗಂಟೆಯ ಒಳಗಾಗಿ ನೀವು ಜಾಗ ಖಾಲಿ ಮಾಡಬೇಕು ಎಂದು ಹೇಳಿ ಹೋಗಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದು ನೌಕರರು ಮುಂದುವರಿಸುವುದಾಗಿ ತಿಳಿಸಿದ್ದಾರೆ.