ಬೆಂಗಳೂರು: ಸಾರಿಗೆ ನಿಮಗಳಲ್ಲಿನ ಕುರುಡು ಕಾಂಚಾಣ ತಾಂಡವವಾಡುತ್ತಿದ್ದು, ಈ ಲಂಚಾವತಾರಕ್ಕೆ ಕಡಿವಾಣ ಹಾಕಲು ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಮತ್ತು ಜಾಗೃತಾ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಬಗ್ಗೆ ನೌಕರರಿಗೆ ಅರಿವು ಮೂಡಿಸಲು ಘಟಕ ಮಟ್ಟದಲ್ಲಿ ಭ್ರಷ್ಟಾಚಾರ ಮುಕ್ತ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಅಂಗವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಾಗಲಕೋಟೆ ವಿಭಾಗದಲ್ಲಿ ಭ್ರಷ್ಟಾಚಾರ ಮುಕ್ತ ಸಂಸ್ಥೆ ಮಾಡುವುದಕ್ಕೆ ಪ್ರತಿಜ್ಞಾ ವಿಧಿ ಬೋಧಿಸಲಾಗಿದೆ.
ಇನ್ನು ಈ ಬಗ್ಗೆ ಬಿಎಂಟಿಸಿ ಲಂಚಮುಕ್ತ ಬಿಎಂಟಿಸಿ ಎಂಬ ಪ್ರಕಟಣೆಯನ್ನೇ ಹೊರಡಿಸಿದ್ದು, ನೌಕರರಿಗೆ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕರು ಈ ಬಗ್ಗೆ ಪ್ರಕಟಣೆಯನ್ನೇ ಹೊರಡಿಸಿದ್ದು, ಸಂಸ್ಥೆಯಲ್ಲಿ ಯಾವುದೇ ಕೆಲಸಕ್ಕೆ ಲಂಚದ ಬೇಡಿಕೆ ಇಡುವುದು, ಒತ್ತಾಯಪೂರ್ವಕವಾಗಿ ಚಂದಾ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲ ಯಾರಾದ್ರೂ ಲಂಚಕ್ಕೆ ಬೇಡಿಕೆ ಇಟ್ಟರೇ ಬಿಎಂಟಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಇನ್ನು ಈಗಾಗಲೇ ವಿಜಯಪಥದಲ್ಲಿ ಅಧಿಕಾರಿಗಳ ಲಂಚಾವತಾರದ ಬಗ್ಗೆ ಕಳೆದ 6 ವರ್ಷಗಳಿಂದ ನಿರಂತರವಾಗಿ ವರದಿ ಬಂದಿದ್ದರಿಂದ ಪ್ರಸ್ತುತ ಯಾವುದೇ ಬಸ್ ನಿಲ್ದಾಣಗಳಲ್ಲಿ ಟಿಸಿಗಳು ಪಡೆಯುತ್ತಿದ್ದ ಲಂಚಕ್ಕೆ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ.
ಆದರೆ ಕೆಲವು ಡಿಪೋಗಳಲ್ಲಿ ಹಾಗೂ ವಿಭಾಗೀಯ ಕಚೇರಿಗಳಲ್ಲಿ ಲಂಚಾವತಾರ ನಡೆಯುತ್ತಿದೆ. ಲಂಚ ಪಡೆಯುವ ಭ್ರಷ್ಟರು ಈ ಹಿಂದಿನಂತೆ ಫೋನ್ ಪೇ ಗೂಗಲ್ ಪೇ ಮಾಡಿಸಿಕೊಳ್ಳುತ್ತಿಲ್ಲ. ತಮ್ಮ ಮಧ್ಯವರ್ತಿಗಳ ಮೂಲಕ ನಗದಿನ ರೂಪದಲ್ಲಿ ಲಂಚ ಪಡೆಯುತ್ತಿದ್ದಾರೆ.
ಇದಕ್ಕೆ ಕಡಿವಾಣ ಬೀಳಬೇಕು ಎಂಬ ದೃಷ್ಟಿಯಿಂದ ಈಗ ಭ್ರಷ್ಟಾಚಾರ ಮುಕ್ತ ಸಪ್ತಾಹವನ್ನು ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹಕ್ಕೆ ಪ್ರತಿಯೊಬ್ಬ ನೌಕರರು ಬೆಂಬಲ ನೀಡಿದರೆ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕರ ಯೋಜನೆ ಸಹಕಾರಗೊಳ್ಳಲಿದೆ.
Related









