
ಚೇಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಯರಬಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಯರಬಳ್ಳಿ ಗ್ರಾಮದ ನಿವಾಸಿ ಮಂಜುನಾಥ್ (35) ಮೃತ ಬೈಕ್ ಸವಾರ. ಮಂಜುನಾಥ್, ಪತ್ನಿ ಬಾಣಂತನಕ್ಕೆಂದು ತವರು ಮನೆ ಮಚ್ಚೂರಳ್ಳಿಗೆ ಹೋಗಿದ್ದಾರೆ. ತನ್ನ ಪತ್ನಿ ಹಾಗೂ 20 ದಿನದ ಮಗುವನ್ನು ನೋಡಿಕೊಂಡು ರಾತ್ರಿ ಬೈಕ್‌ನಲ್ಲಿ ಗ್ರಾಮಕ್ಕೆ ವಾಪಸ್ ಬರುತ್ತಿದ್ದಾಗ ತುಮಕೂರಿನಿಂದ ಮಚ್ಚೂರಳ್ಳಿ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಬೇಲೂರು ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಬುಲೆರೋ ಬಸ್ ನಡುವೆ ಭೀಕರ ಅಪಘಾತ: ನಾಲ್ವರು ಸಾವು

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಬುಲೆರೋ ಮತ್ತು ಸಾರಿಗೆ ಬಸ್ ನಡುವೆ ನಿನ್ನೆ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಯಾದಗಿರಿ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ವರ್ಕನಹಳ್ಳಿ ಗ್ರಾಮದ ನಿವಾಸಿಗಳಾದ ಬುಲೆರೋ ಚಾಲಕ ಶರಣಪ್ಪ (30), ಸುನಿತಾ (19), ಸೋಮವ (50) ಮತ್ತು ತಂಗಮ್ಮ (55) ಎಂದು ಗುರುತಿಸಲಾಗಿದ್ದು, ವಾಹನದಲ್ಲಿದ್ದ ಇತರ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿಯ ಘಟ್ಟರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಜವಳ ಸಮಾರಂಭಕ್ಕಾಗಿ ಕುಟುಂಬ ಸಮೇತ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.